ಕಾರವಾರ: ಅಕ್ರಮವಾಗಿ ಬೆಲೆಬಾಳುವ ಮರದ ದಿಮ್ಮಿಗಳ ಸಾಗಾಟ ಮಾಡಿದ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲಾ ಅರಣ್ಯ ಮುಖ್ಯಾಧಿಕಾರಿ ವಸಂತ್ ರೆಡ್ಡಿ ಅವರು ಐವರು ಡಿಆರ್ಎಫ್ಒಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಸುರೇಶ್ ವಡ್ಡರ್, ಮಾರುತಿ ಸೋರಗಾವಿ, ಮಹೇಶ್ ಬೋರ್ಕರ್, ಹನುಮಂತ ಬಂಡಿವಡ್ಡರ್, ಗುರುಚಂದ್ರ ಎಂ. ಬ್ಯಾಳಿ ಅಮಾನತುಗೊಂಡ ಅಧಿಕಾರಿಗಳು.
ಅರಣ್ಯ ಇಲಾಖೆಗೆ ಸಂಬಂಧಿಸಿದ 30 ಲಕ್ಷಕ್ಕೂ ಅಧಿಕ ಮೌಲ್ಯದ 52 ಮರದ ದಿಮ್ಮಿಗಳನ್ನು ಎರಡು ಲಾರಿಗಳ ಮೂಲಕ ಅಕ್ರಮವಾಗಿ ಶಿರಸಿಗೆ ಸಾಗಾಟ ಮಾಡಲಾಗುತ್ತಿತ್ತು. ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಅಧಿಕಾರಿಗಳು ಇದರ ಹಿಂದಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು.
ಆರೋಪಿಗಳು ಹೊರಗಾಕಿದ ಮಾಹಿತಿ ಆಧರಿಸಿ ಡಿಆರ್ಎಫ್ಒಗಳನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಮರದ ದಿಮ್ಮಿಗಳ ಸಾಗಾಟದಲ್ಲಿ ಅಧಿಕಾರಿಗಳು ಶಾಮೀಲು ಆರೋಪ ಸಾಬೀತಾದ ಹಿನ್ನೆಲೆ ಐವರು ಡಿಆರ್ಎಫ್ಒಗಳ ಅಮಾನತು ಮಾಡಲಾಗಿದೆ. ಅಲ್ಲದೆ, ವಲಯ ಅರಣ್ಯಾಧಿಕಾರಿ ಜಿಟಿ ರೇವಣಕರ್ ವಿರುದ್ಧ ಕ್ರಮಕ್ಕೆ ರಾಜ್ಯ ಅರಣ್ಯ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡಲಾಗಿದೆ.