ಫೋರ್ಬ್ಸ್ ‘ದಿ ಗ್ಲೋಬಲ್ 2000’ ಪಟ್ಟಿ ಪ್ರಕಟ; ಭಾರತೀಯ ಸಂಸ್ಥೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಗೆ ಅಗ್ರಸ್ಥಾನ

ಮುಂಬೈ (ಜೂ.13): ಪ್ರತಿಷ್ಟಿತ ಫೋರ್ಬ್ಸ್ ನಿಯತಕಾಲಿಕ 2023ನೇ ಸಾಲಿನ ‘ದಿ ಗ್ಲೋಬಲ್ 2000’ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತೀಯ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಈ ಬಾರಿಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಅಗ್ರಸ್ಥಾನದಲ್ಲಿದೆ. ಆದಾಯ, ಲಾಭ ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ರಿಲಯನ್ಸ್ ಹಿಂದಿನಂತೆ ಈ ಬಾರಿ ಕೂಡ ಭಾರತದ ಅತೀದೊಡ್ಡ ಕಾರ್ಪೋರೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇನ್ನು ‘ದಿ ಗ್ಲೋಬಲ್ 2000’ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ ರಿಲಯನ್ಸ್ 45ನೇ ಸ್ಥಾನದಲ್ಲಿದೆ. ವಿಶೇಷವೆಂದ್ರೆ ಈ ಪಟ್ಟಿಯಲ್ಲಿ ರಿಲಯನ್ಸ್ ಜನಪ್ರಿಯ ಜಾಗತಿಕ ಕಾರ್ಪೋರೇಟ್ ಸಂಸ್ಥೆಗಳಾದ ಜರ್ಮನಿಯ ಬಿಎಂಡಬ್ಲ್ಯು ಗ್ರೂಪ್, ಸ್ವಿರ್ಜಲೆಂಡ್ ನ ನೆಸ್ಲೆ, ಚೀನಾದ ಅಲಿಬಾಬಾ ಗ್ರೂಪ್, ಅಮೆರಿಕದ ಪ್ರೊಕ್ಟರ್ ಹಾಗೂ ಗ್ಯಾಂಬ್ಲೆ ಮತ್ತು ಜಪಾನಿನ ಸೋನಿಗಿಂತ ಮುಂದಿದೆ. ಇನ್ನು ಈ ಪ್ರತಿಷ್ಠಿತ ಪಟ್ಟಿಯಲ್ಲಿ ರಿಲಯನ್ಸ್ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ ಕೂಡ. 2022ನೇ ಸಾಲಿನ ಈ ಪಟ್ಟಿಯಲ್ಲಿ ರಿಲಯನ್ಸ್  ಇಂಡಸ್ಟ್ರೀಸ್ 53ನೇ ಸ್ಥಾನದಲ್ಲಿತ್ತು, ಆದರೆ, 2023ನೆ ಸಾಲಿನಲ್ಲಿ 45ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ‘ದಿ ಗ್ಲೋಬಲ್ 2000’ ಪಟ್ಟಿಯಲ್ಲಿ ರಿಲಯನ್ಸ್ ಸ್ಥಾನದಲ್ಲಿ ಏರಿಕೆ ಕಂಡುಬಂದಿದೆ. 

ರಿಲಯನ್ಸ್ ಹೊರತುಪಡಿಸಿ 2023ನೇ ಸಾಲಿನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಪ್ರಮುಖ ಭಾರತೀಯ ಸಂಸ್ಥೆಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 77ನೇ ಸ್ಥಾನ, ಎಚ್ ಡಿಎಫ್ ಸಿ ಬ್ಯಾಂಕ್ 128ನೇ ಸ್ಥಾನ ಹಾಗೂ ಐಸಿಐಸಿಐ ಬ್ಯಾಂಕ್ 163ನೇ ಸ್ಥಾನ. ಅಮೆರಿಕ ಮೂಲದ ಜೆಪಿ ಮೋರ್ಗಾನ್ ಸಂಸ್ಥೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ.