ಜುಲೈ 6ರವರೆಗೂ ದೇಶದಲ್ಲಿ ಮುಂಗಾರು ದುರ್ಬಲ

ನವದೆಹಲಿ: ಈ ಬಾರಿ ತಡವಾಗಿಯೇ ದೇಶವನ್ನು ಪ್ರವೇಶ ಮಾಡಿರುವ ಮುಂಗಾರು ಮಾರುತಗಳು ಜು.6ರ ತನಕ ಮುಂಗಾರು ದುರ್ಬಲವಾಗಿರಲಿದೆ ಎಂದು ಹವಾಮಾನ ಇಲಾಖೆ ಮತ್ತು ಸ್ಕೈಮೇಟ್‌ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಗಳು ಹೇಳಿವೆ.  ಜು.6ರ ತನಕ ದೇಶದ ಇತರ ಭಾಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದ್ದು ನಂತರದ ಮುಂಗಾರು ಚುರುಕಾಗುತ್ತದೆ. ಅಲ್ಲಿಯವರೆಗೆ ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಬಹುತೇಕ ಭಾಗಗಳು ತೀವ್ರ ಶುಷ್ಕ ಪ್ರದೇಶಗಳಾಗಿರಲಿವೆ ಎಂದು ಸ್ಕೈಮೇಟ್‌ ತಿಳಿಸಿದೆ. ಅಲ್ಲದೇ ಇದು ಬಿತ್ತನೆಯ ಸಮಯವಾದ್ದರಿಂದ ರೈತರಿಗೆ ಸಂಕಷ್ಟಎದುರಾಗಿದ್ದು, ಭಾರತವು ಜೂ.1 ರಿಂದ ಶೇ.54ರಷ್ಟುಮಳೆಯ ಕೊರತೆ ಎದುರಿಸುತ್ತಿದೆ. ಇನ್ನು ದಕ್ಷಿಣ ಭಾಗವು ಶೇ.53ರಷ್ಟು, ಮಧ್ಯ ಭಾರತವು ಶೇ.80ರಷ್ಟುಹಾಗೂ ಈಶಾನ್ಯ ಮತ್ತು ಪೂರ್ವ ಭಾರತವು ಶೇ.53ರಷ್ಟು, ವಾಯುವ್ಯ ಭಾರತದಲ್ಲಿ ಶೇ.10 ರಷ್ಟು ಕೊರತೆ ಇದೆ ಎಂದಿದೆ.

ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ವಿಳಂಬವಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಿದ್ದರೂ ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂಬ “ಕಾಂಗ್ರೆಸ್‌ ಬಂತು – ಬರಗಾಲ ತಂತು” ಎನ್ನುವ ಜನಸಾಮಾನ್ಯರ ಗಾದೆಯಂತೆ ಈ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬರಗಾಲದ ಛಾಯೆ ಕಂಡುಬರುತ್ತಿದೆ. ಇನ್ನು ಅರಬ್ಬೀ ಸಮುದ್ರದಲ್ಲಿ ಉಂಟಾದ ಬಿಪೋರ್‌ಜಾಯ್‌ ಚಂಡಮಾರುತದ ಪರಿಣಾಮದಿಂದ ಮಳೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಈಗ ಮುಂಗಾರು ಬರದೇ ರೈತರು ಬಿತ್ತನೆ ಕಾರ್ಯಗಳನ್ನು ಮಾಡದೇ ಮಳೆಗಾಗಿ ಎದುರು ನೋಡಿತ್ತಿದ್ದಾರೆ. ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮೋಡ ಬಿತ್ತನೆಗೆ ಚಿಂತನೆ ಮಾಡಲಾಗಿದೆ.