ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ: ಕೆಜೆ ಜಾರ್ಜ್‌

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನೂತನ ದರ ಜಾರಿ ಆಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

ವಿದ್ಯುತ್ ದರ ಏರಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಹೊಸ ವಿದ್ಯುತ್ ದರ ನಮ್ಮ ಕಾಲದಲ್ಲಿ ಜಾರಿ ಮಾಡಬೇಕಾಗಿದೆ. ದರ ತಡೆಯುವ ಕುರಿತು ಕೆಇಆರ್‌ಸಿಗೆ ಮನವಿ ಮಾಡುವ ಮುನ್ನ ನಾವು ಅಧ್ಯಯನ ಮಾಡಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅಧ್ಯಯನ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ಉತ್ತರಿಸಿದರು.

ದರ ಹೆಚ್ಚಳ ಮಾಡುವಂತೆ ಎಲ್ಲಾ ಎಸ್ಕಾಂ ಮನವಿ ಮಾಡುತ್ತದೆ. ನಮ್ಮ ಅಧಿಕಾರಿಗಳೇ ಹೋಗಿ ಕೆಇಆರ್‌ಸಿ ಮುಂದೆ ಪ್ರಸ್ತಾಪ ಇಡುತ್ತಾರೆ. ಈ ಕಾರಣಕ್ಕೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.

ಸದ್ಯ ಮಳೆ ಕೊರತೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮಳೆ ಬರಲು ಇನ್ನೂ ಸಮಯ ಇದೆ. ಸದ್ಯ ಸೋಲಾರ್‌ ಮತ್ತು ಪವನ ಶಕ್ತಿಯಿದೆ. ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಆಗಸ್ಟ್‌ವರೆಗೂ ಮಳೆ ಬರುವ ನಿರೀಕ್ಷೆ ಇದೆ. ದೇವರ ಮೇಲೆ ಭಾರ ಹಾಕಿದ್ದೇವೆ ಎಂದು ತಿಳಿಸಿದರು.