ಬೆಂಗಳೂರು: 200 ಯೂನಿಟ್ ಕರೆಂಟ್ ಫ್ರೀ ಪಡೆಯೋದು ಹೇಗೆ? ಏನೆಲ್ಲಾ ದಾಖಲೆ ಕೊಟ್ಟರೆ ಕರೆಂಟ್ ಫ್ರೀ ಸಿಗುತ್ತೆ? ಫ್ರೀ ಕರೆಂಟ್ ಸಿಕ್ಕರೆ ಎಷ್ಟು ಹಣ ಉಳಿತಾಯವಾಗುತ್ತೆ ಎಂದು ಜನ ಲೆಕ್ಕ ಹಾಕುತ್ತಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ವಿದ್ಯುತ್ ದರ(electricity bill) ಏರಿಕೆ ಶಾಕ್ ಜನರನ್ನು ಕಂಗೆಡಿಸಿದೆ. ಜೂನ್ ತಿಂಗಳಲ್ಲಿ ಬಿಲ್ ಕೈ ಸೇರುತ್ತಿದ್ದಂತೆಯೇ ಗ್ರಾಹಕರ ಕೈಗೇ ಶಾಕ್ ಹೊಡೆದಂತಾಗಿದೆ. ಯಾಕಂದ್ರೆ ಕಳೆದ ತಿಂಗಳು ಕಟ್ಟಿದ ಬಿಲ್ಗೂ, ಈ ತಿಂಗಳು ಬಂದಿರೋ ಬಿಲ್ಗೂ ಡಬಲ್ ವ್ಯತ್ಯಾಸವಿದೆ. ಮೇ ತಿಂಗಳಲ್ಲಿ 200 ರೂಪಾಯಿ ಕಟ್ಟಿದ ಗ್ರಾಹಕರು, ಈ ತಿಂಗಳು 600 ರೂಪಾಯಿ ಬಿಲ್ ನೋಡಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಈ ಬಿಲ್ ಏರಿಕೆಯಿಂದ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ವಿರೋಧ ಪಕ್ಷಗಳು ಸಹ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಇಂದು(ಜೂನ್ 11) ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿದ್ಯುತ್ ದರ ಹೆಚ್ಚಿಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ವಿದ್ಯುತ್ ದರ ಹೆಚ್ಚಳ ಮಾಡಿರುವುದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಳ ಮಾಡಿಲ್ಲ. ವಿದ್ಯುತ್ ದರ ಹೆಚ್ಚಳ ಬಗ್ಗೆ ಏ.1ರಂದು ತೀರ್ಮಾನ ಆಗಿತ್ತು ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ದರ ಏರಿಸಿದ್ದು ನಾವಲ್ಲ. ಮೇ 12ರಿಂದ ವಿದ್ಯುತ್ ದರ ಏರಿಕೆ ಎಂದು ಏಪ್ರಿಲ್ ನಲ್ಲೇ ತೀರ್ಮಾನ ಆಗಿತ್ತು. ಗ್ಯಾರಂಟಿ ಯೋಜನೆಯಿಂದ ವಿಪಕ್ಷಗಳಿಗೆ ನಡುಕ ಶುರುವಾಗಿದೆ. ಬೇಕಾದಷ್ಟು ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಅವರು ಗೇಲಿ ಮಾಡಿಕೊಂಡು ಅಲ್ಲಿಯೇ ಇರಲಿ. ನಮ್ಮ ಗ್ಯಾರಂಟಿ ಮುಂದುವರಿಸಿಕೊಂಡು ನಾವು ಮುಂದೆ ಹೋಗುತ್ತೇವೆ. ಜುಲೈ 1ರಿಂದ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿ ಆಗುತ್ತೆ. 200 ಯೂನಿಟ್ಯೊಳಗೆ ವಿದ್ಯುತ್ ಬಳಸಿದರೆ ಬಿಲ್ ಬರುವುದಿಲ್ಲ.ಗೊಂದಲ ಸೃಷ್ಟಿ ಮಾಡುವುದೇ ಬಿಜೆಪಿಯರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಏಪ್ರಿಲ್ ತಿಂಗಳಿನಲ್ಲೇ ವಿದ್ಯುತ್ ದರವನ್ನ ಕೆಇಆರ್ಸಿ ಏರಿಕೆ ಮಾಡಿತ್ತು. ಪ್ರತೀ ಯುನಿಟ್ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿತ್ತು. ಆದ್ರೆ ಚುನಾವಣೆ ಹಿನ್ನಲೆಯಲ್ಲಿ ಈ ದರ ಏರಿಕೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಲಾಗಿತ್ತು. ಈಗ ಹೊಸ ಸರ್ಕಾರ ಬರುತ್ತಿದ್ದಂತೆಯೇ ಕೆಇಆರ್ಸಿ ದರ ಏರಿಕೆ ಜಾರಿಮಾಡಿದೆ. ಅಲ್ಲದೇ ಏಪ್ರಿಲ್ ಮತ್ತು ಮೇ ತಿಂಗಳಿನಿಂದಲೇ ದರ ಏರಿಕೆಯನ್ನ ಅನ್ವಯವಾಗುವಂತೆ ಮಾಡಿದೆ. ಹೀಗಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಳಸಿದ ವಿದ್ಯುತ್ನ ಪ್ರತೀ ಯುನಿಟ್ಗೆ 70 ಪೈಸೆ ಈ ಜೂನ್ ತಿಂಗಳ ಬಿಲ್ನಲ್ಲಿ ಹೆಚ್ಚುವರಿ ವಸೂಲಿ ಮಾಡಲಾಗಿದೆ. ಪ್ರತಿಯೊಬ್ಬರ ಮನೆಗೆ ಬಂದ ವಿದ್ಯುತ್ ಬಿಲ್ನಲ್ಲೂ ಬಾಕಿ ಎಂಬ ಕಾಲಂನಲ್ಲಿ ಈ ಹೆಚ್ಚುವರಿ ಮೊತ್ತ ನಮೂದಿಸಿ ವಸೂಲು ಮಾಡಲಾಗ್ತಿದೆ. ಜೊತೆಗೆ ನಿಗದಿತ ಶುಲ್ಕವೂ ಹೆಚ್ಚಾಗಿರುವುದರಿಂದ ಬಿಲ್ ಏಕಾ ಏಕಿಯಾಗಿ ಡಬಲ್ ಬಂದಿದೆ.