ಅಂಕೋಲಾ : ಅರಣ್ಯ ವಾಸಿ ಬುಡಕಟ್ಟು ಜನಾಂಗದವರಿಗೆ ಮತ್ತು ಸಾಂಪ್ರದಾಯಿಕ ಅರಣ್ಯ ವಾಸಿಗಳಿಗೆ ” ಬೃಹತ್ ಕಾನೂನು ಸೇವೆಗಳ ಶಿಬಿರ” ; ಹಲವು ಇಲಾಖೆಗಳ ಸಾಥ್

ಅಂಕೋಲಾ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅಂಕೋಲಾ ತಾಲೂಕಿನ ರಾಮನಗುಳಿಯ ಸಾತನಬೈಲ್ ನ ಸಿದ್ಧಿ ವಾಲ್ಮೀಕಿ ಭವನದಲ್ಲಿ ಅರಣ್ಯ ವಾಸಿ ಬುಡಕಟ್ಟು ಜನಾಂಗದವರಿಗೆ ಮತ್ತು ಸಾಂಪ್ರದಾಯಿಕ ಅರಣ್ಯ ವಾಸಿಗಳಿಗೆ ” ಬೃಹತ್ ಕಾನೂನು ಸೇವೆಗಳ ಶಿಬಿರ” ಆಯೋಜಿಸಲಾಗಿತ್ತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಡಿ ಎಸ್ ವಿಜಯಕುಮಾರ ಅವರು ” ಗಿಡ ನೆಡೋಣ ಬನ್ನಿ” ಎಂಬ ವ್ಯಾಖ್ಯಾನದೊಂದಿಗೆ ಅರಣ್ಯ ಇಲಾಖೆಯ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಬಿರದ ಉದ್ದೇಶಗಳನ್ನು ವಿವರಿಸಿ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಾಯಣ್ಣ ಬಿ ಎಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ ಟಿ ಜಯಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಅನ್ನಪೂರ್ಣ ವಸ್ತ್ರದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಎನ್ ಜಾಂಬಾವಳಿಕರ್, ಕಾರವಾರ ಅಂಕೋಲಾ ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.
ಶಿಬಿರದ ಅಂಗವಾಗಿ ಕಾನೂನು ಸೇವೆಗಳ ಅರಿವಿನ ಕುರಿತು ಉಪನ್ಯಾಸ ನಡೆಯಿತು. ನಂತರ ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆ, ವೈದ್ಯಕೀಯ ತಪಾಸಣೆ, ಚುನಾವಣಾ ಗುರುತಿನ ಚೀಟಿ ನೋಂದಣಿ ಮತ್ತು ತಿದ್ದುಪಡಿ, ಆಧಾರ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ, ಪಿಂಚಣಿ ನೋಂದಣಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ನೋಂದಣಿ ಸೇವೆಗಳನ್ನು ಒದಗಿಸಲಾಯಿತು.
ಬುಡಕಟ್ಟು ಜನಾಂಗದವರ ಬಳಿ ತೆರಳಿ ಅವರಿಗೆ ಅರ್ಹ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ರೂಪಿಸಿರುವ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು.