ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ” ಗೆ ನಾಳೆ (ಜೂ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಯೋಜನೆಯ ಅಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇನ್ನೂವರೆಗು ರಾಜ್ಯದ ಕೆಲವು ಹಳ್ಳಿಗೆ ಬಸ್ ಸಂಪರ್ಕವಿಲ್ಲ. ದಿನನಿತ್ಯ ಜನರು ಬಸ್ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. ಅದೇ ರೀತಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅನಂತಗಿರಿ ಗ್ರಾಮಕ್ಕೆ ಸ್ವಾತಂತ್ರ್ಯ ಕಾಲದಿಂದಲೂ ಬಸ್ ಬಂದಿಲ್ಲ. ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿನಿತ್ಯ ಮೂರು ಕಿಮೀ ನಡೆದುಕೊಂಡು ಹೋಗಿ ಬಸ್ ಹತ್ತಬೇಕು. ಇಲ್ಲ ಟಂಟಂಗೆ ಕೇಳಿದಷ್ಟು ಹಣ ಹೋಗುವಂತ ಪರೀಸ್ಥಿತಿ ಇದೆ.
ಈ ಬಗ್ಗೆ ಓರ್ವ ವಿದ್ಯಾರ್ಥಿನಿ ಮಾತನಾಡಿ ನಮಗೆ ಬಸ್ ಇಲ್ಲದ ಹಿನ್ನೆಲೆ ನಡೆದುಕೊಂಡು ಹೋಗಬೇಕು. ಬಸ್ ಬರದೆ ಇದ್ದರೇ ಮನೆಲಿ ಕೂರಬೇಕು. ಮನೆಯಲ್ಲಿ ಕೂತರೆ ತಂದೆ ತಾಯಿ ಬೈತಾರೆ. ಯಾಕೆ ಶಾಲೆ ಹೋಗಿಲ್ಲ ಅಂತ ಕೇಳ್ತಾರೆ. ಮನೆಯಲ್ಲಿ ಕೂತರೆ ದಡ್ಡರಾಗುತ್ತೇವೆ. ಬಸ್ ಬರೋದಿಲ್ಲ ಇದರಿಂದ ತೊಂದರೆ ಆಗುತ್ತದೆ. ಟಂಟಂ ಕೂಡ ಸರಿಯಾಗಿ ಬರೋದಿಲ್ಲ. ಲೇಟ್ ಆಗಿ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೈತಾರೆ. ನಮ್ಮೂರಿಗೆ ಬಸ್ಸೇ ಇಲ್ಲ ಅಂದರೆ ಉಚಿತ ಪ್ರಯಾಣ ಹೇಗೆ. ನಮ್ಮೂರಿಗೆ ಬಸ್ ಬಿಡಿ ಎಂದು ಮನವಿ ಮಾಡಿದ್ದಾರೆ.