ಕೈರೋ: ಸಮುದ್ರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಪ್ರವಾಸಿಗನ ಮೇಲೆ ಟೈಗರ್ ಶಾರ್ಕ್ ದಾಳಿ ನಡೆಸಿ, ತನ್ನ ತಂದೆ ಎದುರೇ ಕೊಂದು ತಿಂದಿರುವ ಘಟನೆ ಈಜಿಪ್ಟ್‌ನ ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್‌ನಲ್ಲಿ ನಡೆದಿದೆ.
ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರವಾಸಿಗ ವ್ಲಾಡಿಮಿರ್ ಪೊಪೊವ್ (23) ಎಂದು ಗುರುತಿಸಲಾದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್ನ ಪರಿಸರ ಸಚಿವಾಲಯ ತಿಳಿಸಿದೆ.
ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಮೀ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಮೃತನ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಿಲ್ಲ.
ಶಾರ್ಕ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್ನಿಂದ ತಪ್ಪಿಸಿಕೊಳ್ಳಲು ಪ್ರವಾಸಿಗ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿದ್ದಾನೆ. ಈ ವೇಳೆ ಶಾರ್ಕ್ ಎರಡ್ಮೂರು ಬಾರಿ ದಾಳಿ ಮಾಡಿ, ಅಂತಿಮವಾಗಿ ವ್ಯಕ್ತಿಯನ್ನ ನೀರಿನ ಒಳಕ್ಕೆ ಎಳೆದೊಯ್ದಿದೆ. ಲೈಫ್‌ಗಾರ್ಡ್ ಸಹಾಯಕ್ಕಾಗಿ ಕೂಗಿಕೊಂಡರೂ ಆತನನ್ನು ರಕ್ಷಿಸಲು ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ಹೋಗುವಷ್ಟರಲ್ಲೇ ಶಾರ್ಕ್ ಆತನನ್ನು ಮತ್ತಷ್ಟು ನಿರೀನ ಆಳಕ್ಕೆ ಎಳೆದುಕೊಂಡು ಹೋಗಿತ್ತು.
ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಷ್ಯಾ ರಾಯಭಾರ ಕಚೇರಿ ಎಚ್ಚರಿಸಿದೆ.