ನೋಯ್ಡಾದಲ್ಲಿ ಚಲಿಸುತ್ತಿದ್ದ ಮೆಟ್ರೋ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ನೋಯ್ಡಾದ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಇಲ್ಲಿನ ಮೆಟ್ರೋ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ದೆಹಲಿ ಮೆಟ್ರೋ ರೈಲು ನಿಗಮದ ಕಾರಿಡಾರ್‌ನ ನೀಲಿ ಲೈನ್‌ನಲ್ಲಿರುವ ಸೆಕ್ಟರ್ 52 ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಘಟನೆ ವರದಿಯಾಗಿದೆ, ಮೃತ ವ್ಯಕ್ತಿ ಸುಮಾರು 35 ವರ್ಷ ಆಸುಪಾಸಿನವರಾಗಿದ್ದಾರೆ, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ.

ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ, ನೋಯ್ಡಾ ಸೆಕ್ಟರ್ -34 ಮೆಟ್ರೋ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು, 32 ವರ್ಷದ ಇಂಜಿನಿಯರ್ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಸಾವನ್ನಪ್ಪಿದರು.

ಉಪ ಪೊಲೀಸ್ ಆಯುಕ್ತರಾದ ಹರೀಶ್ ಚಂದರ್ ಅವರು ನೀಡಿದ ಮಾಹಿತಿಯ ಪ್ರಕಾರ, ಮೃತರನ್ನು ಪ್ರಶಾಂತ್ ದೀಕ್ಷಿತ್ ಎಂದು ಗುರುತಿಸಲಾಗಿದೆ, ಮೂಲತಃ ಭದೋಹಿಯವರು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ನೋಯ್ಡಾ ಸೆಕ್ಟರ್ 74 ರಲ್ಲಿ ವಾಸಿಸುತ್ತಿದ್ದರು.

ದೀಕ್ಷಿತ್ 2017 ರಲ್ಲಿ ಮುಂಬೈನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಕೆಲಸ ಸಿಗುವ ಬಗ್ಗೆ ಚಿಂತಿಸುತ್ತಿದ್ದರು ಎಂದು ಚಂದರ್ ಹೇಳಿದ್ದಾರೆ. ದೀಕ್ಷಿತ್ ಅವರು ಮೆಟ್ರೋ ರೈಲಿನ ಮುಂದೆ ಜಿಗಿದ ನಂತರ, ಸ್ಥಳದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.