ಕಾಮಗಾರಿ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ; ಮುಂಗಾರು ಪೂರ್ವ ಸಿದ್ಧತೆ ಪರಿಶೀಲಿಸಿದ ಬಳಿಕ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು: ಕಾಮಗಾರಿ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ. ಬೆಂಗಳೂರು ನಗರದ ಬಗ್ಗೆ ಈ ಹಿಂದೆ ಕೆಟ್ಟ ಹೆಸರು ಬಂದಿತ್ತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಹೇಳಿದರು. ನಗರದ ವಿವಿಧ ಕಡೆಗಳಲ್ಲಿ ಮುಂಗಾರು ಪೂರ್ವ ಸಿದ್ಧತೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ರಾಮಗೊಂಡನಹಳ್ಳಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾಲುವೆ, ಒಳಚರಂಡಿಗಳನ್ನು ಪರಿಶೀಲನೆ ನಡೆಸಿದ್ದೇನೆ. ಮಳೆ ನೀರಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ತಿಳಿಸಿದರು.

ಡಿಕೆ ಶಿವಕುಮಾರ್ ಅವರು ಗುರುವಾರ ಮುಂಗಾರು ಪೂರ್ವ ಸಿದ್ಧತೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಶಿವಕುಮಾರ್ ಜತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇತರ ಅಧಿಕಾರಿಗಳು ಮತ್ತು ಮಹದೇವಪುರ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಇದ್ದರು.

ಉಪಮುಖ್ಯಮಂತ್ರಿ ಅವರು ಯಮಲೂರಿನಲ್ಲಿ ಒತ್ತುವರಿ ಮತ್ತು ಮಳೆನೀರು ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು. ಎಸ್‌ಡಬ್ಲ್ಯುಡಿ ಅಗಲ ಕಡಿಮೆಯಾದ ಬಗ್ಗೆ ಗಮನಹರಿಸಿ ತಾತ್ಕಾಲಿಕ ಕ್ರಮವಾಗಿ ಕಚ್ಚೆ ಚರಂಡಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ವರ್ಷ ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದ ಹಾನಿಗೊಳಗಾದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಯಮಲೂರು ಕೂಡ ಒಂದು. ಇಲ್ಲಿಗೆ ಬೇಟಿ ನೀಡಿದ ಡಿಕೆ ಶಿವಕುಮಾರ್, ಯಮಲೂರಿನ ದಿವ್ಯಶ್ರೀ ಬಳಿ ನಿರ್ಮಾಣವಾಗ್ತಿರೋ ಹೊಸ ರಾಜಕಾಲುವೆ ತಡೆ ಗೋಡೆ ಪರಿಶೀಲಿಸಿದರು.

ನಂತರ ಬೆಳ್ಳಂದೂರು ಕೆರೆಗೆ ಬೇಟಿ ನೀಡಿದರು. ಕೆರೆಯಲ್ಲಿ ಅಧಿಕಾರಿಗಳು ಕಾಮಗಾರಿ ಪ್ರಗತಿ ಕುರಿತು ಶಿವಕುಮಾರ್ ಅವರಿಗೆ ಮಾಹಿತಿ ನೀಡಿದರು.

ಬಳಿಕ ಬೆಂಗಳೂರಿನ ಸರ್ಜಾಪುರದ ರೈನ್‌ಬೋ ಡ್ರೈವ್ ಲೇಔಟ್‌ಗೆ ಬಟಿ ನೀಡಿದರು. ಕಳೆದ ವರ್ಷ ಮಳೆಗಾಲದಲ್ಲಿ ಹಲವು ಬಾರಿ ಬಡಾವಣೆ ಜಲಾವೃತವಾಗಿತ್ತು. ಶಿವಕುಮಾರ್ ಲೇಔಟ್ ಬಳಿಯ ಚರಂಡಿಗಳನ್ನು ಪರಿಶೀಲಿಸಿ ಅಧಿಕಾರಿಗಳು ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದರು.