“ಉಚಿತ ಗ್ಯಾರಂಟಿ ಚುನಾವಣಾ ಗಿಮಿಕ್ ಅಷ್ಟೇ” ವೈರಲ್​ ಆದ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಚಲುವರಾಯಸ್ವಾಮಿ

5 ಗ್ಯಾರಂಟಿ ವಿಚಾರವಾಗಿ ತಮ್ಮ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದ್ದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಸಚಿವರು ಏನಂದ್ರು ಇಲ್ಲಿದೆ..

ಮಂಡ್ಯ: ಉಚಿತ ಗ್ಯಾರಂಟಿ ವಿಚಾರವಾಗಿ ತಮ್ಮ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದ್ದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ಕೊಡುತ್ತಾರೆ. ಅದೇ ರೀತಿ ನಾವು ಚುನಾವಣೆಯಲ್ಲಿ ಭರವಸೆ ಕೊಟ್ಟಿದ್ದೇವೆ. ಇದೀಗ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿದ್ದೇವೆ. ಆದರೆ ತಮಿಳುನಾಡು ತರಹ ಉಚಿತ ಯೋಜನೆ ಜಾಸ್ತಿ ಆಯ್ತು ಅಂತ ಜನ ಹೇಳುತ್ತಾರೆ ಎಂದು ಹೇಳಿದರು.

ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿ ಟಿವಿ9 ವರದಿಗಾರರೊಂದಿಗೆ ಮಾತನಾಡಿದ ಅವರು ನಾವು ಗಿಮಿಕ್ ಅಂತ ಹೇಳಿಲ್ಲ ಅದ್ಯಾಕೆ ಸುಮ್ನೆ ಏನೇನೊ ಮಾತಾಡುತ್ತೀರಿ. ಬಿಜೆಪಿಯವರು ವೈರಲ್ ಅಲ್ದೇ ಇನ್ನೊಂದು ಮಾಡೋಕೆ ಹೇಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಮ್ಮ ಹೇಳಿಕೆ ವಿಚಾರವನ್ನು ಪ್ರಶ್ನಿಸಿದಕ್ಕೆ ಮುನಿಸಿಕೊಂಡರು.

ಗ್ಯಾರಂಟಿಗಳ ಬಗ್ಗೆ ಚೆಲುವರಾಯಸ್ವಾಮಿ ಹೇಳಿದ್ದೇನು?

‘ಮೊದಲಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಬಗ್ಗೆ ದೇಶದಲ್ಲೆಲ್ಲ ಚರ್ಚೆಯಾಯಿತು. ನಾವು ಕೂಡ ಚರ್ಚೆ ಮಾಡಿದೆವು. ಇದು ಒಳ್ಳೆಯದಲ್ಲ ಎಂಬುದಾಗಿ. ಮುಂದೆ ಫ್ರೀ ಫ್ರೀ ಅಂತ ಹೋದರೆ ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಅಂತ. ಈಗ ನಾವುಗಳೂ ಅದೇ ಲೈನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಆವತ್ತಿಗೆ ರಿಸಲ್ಟ್ ಅನಿವಾರ್ಯ ಆಗುತ್ತದೆ. ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ. ಬಟ್ ನಮ್ಮ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ, ಸಿದ್ದರಾಮಯ್ಯನವರ ಮನಸಿಗೆ ಇಷ್ಟ ಆಗ್ತದೋ ಇಲ್ಲವೋ ಕೆಲವೊಂದನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಕೆಲವನ್ನು ಆ್ಯಕ್ಸೆಪ್ಟ್ ಮಾಡಬೇಕಾಗುತ್ತದೆ’ ಎಂದು ಚೆಲುವರಾಯಸ್ವಾಮಿ ಹೇಳಿದ್ದರು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ, ಪ್ರತಿ ತಿಂಗಳು 200 ಯೂನಿಟ್​ ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಕೆಎಸ್​ಆರ್​​ಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ಯುವಕರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು 3,000 ರೂ. ಭತ್ಯೆ ಹಾಗೂ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿಗಳ ಘೋಷಣೆ ಮಾಡಿತ್ತು.