ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹಿರಿಯ ವೈದ್ಯರ ಕಿರುಕುಳವೇ ಕಾರಣ: ಸಂಬಂಧಿಕರ ಆಕ್ರೋಶ

ಕೋಲಾರ: ಆಕೆ ಮಕ್ಕಳ ವೈದ್ಯೆಯಾಗುವ ಕನಸು ಹೊತ್ತು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದಳು. ತಂದೆಯನ್ನು ಕಳೆದುಕೊಂಡಿದ್ದ ಆಕೆ ಕೆಲಸದ ಒತ್ತಡ, ಹಿರಿಯ ವೈದ್ಯರ ಕಿರಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಅಲ್ಲದೆ ತನ್ನ ಸ್ನೇಹಿತನ ಬಳಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿ ಕೊನೆಗೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಭಾನುವಾರ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ದರ್ಶಿನಿ (24) ಕೋಲಾರ ತಾಲೂಕಿನ ಕೆಂದಟ್ಟಿ ಬಳಿಯ ಕ್ವಾರಿಯಲ್ಲಿರುವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯರವ ಕಿರುಕುಳದ ಆರೋಪ ಕೇಳಿ ಬರುತ್ತಿದೆ.

ಪ್ರಕರಣಕ್ಕೆ ಸಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯವರ ಕಿರುಕುಳ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ 7 ತಿಂಗಳ ಹಿಂದೆ ಹೊಸಕೋಟೆ ಬಳಿ ಇರುವ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ವಿದ್ಯಾಭ್ಯಾಸಕ್ಕೆ ಆಗಮಿಸಿದ್ದಳು. ಕಳೆದ 2 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ವಿದ್ಯಾರ್ಥಿನಿ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದು ವೈದ್ಯಳಾಗಬೇಕೆಂಬ ಕನಸು ಹೊತ್ತಿದ್ದಳು. ಆದರೆ ಭಾನುವಾರ ಕೋಲಾರದ ಬಳಿ ಇರುವ ಕ್ವಾರಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.