ಅಭಿಷೇಕ್ ಮದುವೆಗೆ ಬಂದು ಶುಭ ಹಾರೈಸಿದ ರಜನಿಕಾಂತ್

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಆಗಮಸಿದ್ದಾರೆ. ಹಿರಿಯ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮದುವೆಗೆ ಆಗಮಿಸಿರುವ ರಜನಿ, ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ರಜನಿ ಕೆಲಹೊತ್ತು ಇದ್ದು, ಮತ್ತೆ ಚೆನ್ನೈನತ್ತ ಹಾರಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ ಇಂದು ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದರು. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಹಾಜರಿದ್ದರು. ಗುರು ಹಿರಿಯರ ನಿಶ್ಚಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.