‘ಶಾಲೆ ಸೋರುತ್ತಿದೆ ಹೊಸಾ ಕೊಠಡಿ ನಿರ್ಮಿಸಿಕೊಡಿ’

ಹಾವೇರಿ: ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ಬಿಇಓ ಕಚೇರಿ ಮುಂದೆ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ. ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಮಳೆ ಬಂದಾಗ ಸೋರುತ್ತಿದೆ. ಹೀಗಾಗಿ ನಮಗೆ ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರೂ ಕೂಡಾ ಸಾಥ್ ನೀಡಿದ್ರು.

1 ರಿಂದ 6ನೇ ತರಗತಿವರೆಗೆ 76 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದು ಎರಡು ಕೊಠಡಿಗಳು ಸೋರುತ್ತಿವೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ. ಎರಡು ಕೊಠಡಿಗಳು ಮಕ್ಕಳಿಗೆ ಸಾಲುವುದಿಲ್ಲ. ಹೀಗಾಗಿ ಹೊಸ ಕೊಠಡಿ ನಿರ್ಮಿಸಿಕೊಡಿ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.