ಅಪ್ಪುಗೆ ಮತ್ತೆ ‘ಬ್ಲ್ಯೂ ಟಿಕ್’ ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್.!

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸದ್ಯ ಸಂತಸವಾಗಿದೆ. ಅವರ ಟ್ವಿಟ್ಟರ್ ಖಾತೆಗೆ ನೀಡಲಾಗಿದ್ದ ನೀಲಿ ಟಿಕ್ ತೆಗೆದುಹಾಕಿದ್ದ ಟ್ವಿಟರ್ ಮರಳಿ ‘ಬ್ಲೂ ಟಿಕ್’ ನೀಡುವ ಮೂಲಕ ತನ್ನಿಂದಾದ ತಪ್ಪನ್ನು ಸರಿಪಡಿಸಿಕೊಂಡಿದೆ.

ಅಪ್ಪು ನಮ್ಮನ್ನ ಅಗಲಿ 9 ತಿಂಗಳು ಕಳೆದರೂ ಅಭಿಮಾನಿಗಳು ಅವರನ್ನು ಸ್ಮರಿಸದ ದಿನವಿಲ್ಲ. ಇಂತಹ ಶ್ರೇಷ್ಠ ನಟನ ಬಗ್ಗೆ ಟ್ವಿಟ್ಟರ್ ತಾನು ಮಾಡಿದ ಯಡವಟ್ಟಿನಿಂದ ಕೊನೆಗೂ ಬುದ್ದಿ ಕಲಿತಿದೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅವರ ಬಗೆಗಿನ ಕುತೂಹಲಕಾರಿ ವಿಷಯಗಳನ್ನು ಹುಡುಕುವುದನ್ನು ಇನ್ನೂ ಬಿಟ್ಟಿಲ್ಲ. ಅವರ ಪ್ರತಿಯೊಂದು ವಿಡಿಯೋಗಳನ್ನು ಈಗಲೂ ವೀಕ್ಷಿಸುತ್ತಿರುತ್ತಾರೆ. ಈ ನಡುವೆ ಸ್ಟಾರ್‌ಗಳಿಗೆಂದೇ ನೀಡಲಾಗುವ ಬ್ಲ್ಯೂ ಟಿಕ್ ತೆಗೆದಿದ್ದ ಟ್ವಿಟ್ಟರ್ ವಿರುದ್ಧ ಅಪ್ಪು ಅಭಿಮಾನಿಗಳು ಸಿಟ್ಟಿಗೆದ್ದಿದ್ರು.

ಇಷ್ಟು ದಿನ ಪುನೀತ್ ರಾಜಕುಮಾರ್ ಅವರ ಟ್ವಿಟ್ಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಇದ್ದಕ್ಕಿದ್ದ ಹಾಗೆ ಮಾಯವಾಗಿತ್ತು. ಪುನೀತ್ ಅವರ ಖಾತೆಯಲ್ಲಿ ಹಲವು ತಿಂಗಳಿನಿಂದ ಯಾವುದೇ ಪೋಸ್ಟ್ ಹಾಕದ ಕಾರಣ ನೀಲಿ ಟಿಕ್ ತೆಗೆಯಲಾಗಿತ್ತು. ಆದರೆ ಅಭಿಮಾನಿಗಳು ನೀಲಿ ಟಿಕ್ ಮರಳಿ ಕೊಡುವಂತೆ ಟ್ವಿಟರ್‌ಗೆ ಬೇಡಿಕೆ ಇಟ್ಟಿದ್ದರು. ಸದ್ಯ ಈಗ ಅಪ್ಪು ಖಾತೆಗೆ ನೀಲಿ ಟಿಕ್ ಮರಳಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮೂಡಿದೆ.