ದಾಂಡೇಲಿ : ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವ. ನಾವೆಲ್ಲ ವ್ಯಾಪರಿಗಳು ವ್ಯಾಪಾರ ಬಿಟ್ರೆ ಬೇರೆ ಏನು ಮಾಡಲ್ಲ ಅಂದ್ಕೊಂಡಿದ್ದೇವೆ ಅಂತಾದ್ರೆ ಅದನ್ನು ಬಿಟ್ಟು ಬಿಡ್ಬೇಡಿ. ವ್ಯಾಪಾರಿಗಳಲ್ಲಿಯೂ ಸೇವಾ ಮನೋಭಾವನೆಯಿದೆ, ಸಾಮಾಜಿಕ ಕಾಳಜಿಯಿದೆ, ಪರಿಸರ, ಪ್ರಾಣಿ, ಪಕ್ಷಿಗಳ ಮೇಲೆ ಮಮಕಾರವಿದೆ, ಅಂತ:ಕರಣವಿದೆ ಎನ್ನುವುದಕ್ಕೆ ಈ ವರದಿಯೆ ಪ್ರತ್ಯಕ್ಷ ಉದಾಹರಣೆ.
ಅಂದ ಹಾಗೆ ನಾನು ಹೇಳಲು ಹೊಟಿರುವುದು ದಾಂಡೇಲಿ ನಗರದ ಲಿಂಕ್ ರಸ್ತೆಯ ರೆಹಮತ್ ಕಿರಾಣಿ ಅಂಗಡಿಯ ಮಾಲಕರಾದ ಕೆ.ಎ.ಜಮಾಲ್ ಅವರ ಬಗ್ಗೆ, ಇವರು ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಪಾರಿವಾಳಗಳ ಸಮೂಹಕ್ಕೆ ದವಸ ಧಾನ್ಯಗಳನ್ನು ಹಾಕಿ ಅವುಗಳಿಗೆ ಅನ್ನದಾತರಾಗಿದ್ದಾರೆ. ಬೆಳಿಗ್ಗೆ 7 ಗಂಟೆಯಾಯಿತೆಂದರೆ ಕೆ.ಎ.ಜಮಾಲ್ ಅವರು ತನ್ನ ಅಂಗಡಿಯ ಬಾಗಿಲು ತೆರೆದು ಒಳಗೆ ಹೋಗಿ ದವಸ ಧಾನ್ಯಗಳೊಂದಿಗೆ ಅಂಗಡಿಯ ಹೊರಗಡೆ ಬಂದು ಒಂದು ಸಿಳ್ಳೆ ಹೊಡೆಯುತ್ತಾರೆ.
ಅಷ್ಟೊತ್ತಿಗಾಗುವಾಗಲೆ ನೂರಾರು ಸಂಖ್ಯೆಯಲ್ಲಿ ಪಾರಿವಾಳಗಳ ಸಮೂಹ ಅಲ್ಲಿ ಜಮಾವಣೆಗೊಳ್ಳುತ್ತದೆ. ಒಂದು ಹತ್ತು ನಿಮಿಷ ಅದಕ್ಕೆ ದವಸ ಧಾನ್ಯ ಹಾಕುತ್ತಾರೆ. ಏನಿಲ್ಲ ಅಂದರೂ ದಿನಕ್ಕೆ 2 ರಿಂದ 3 ಕಿ.ಲೋ ದವಸ ಧಾನ್ಯಗಳನ್ನು ಕಳೆದ 4 ವರ್ಷಗಳಿಂದ ಕೆ.ಎ.ಜಮಾಲ್ ಅವರು ನಿಸ್ವಾರ್ಥ ಮನೋಭಾವನೆಯಿಂದ ಹಾಗೂ ಪಕ್ಷಿ ಕಾಳಜಿಯಿಂದ ಹಾಕುತ್ತಾ ಬಂದಿದ್ದಾರೆ. ಇಂದು ಸೋಮವಾರವೂ ಬೆಳಿಗ್ಗೆ ಅವರ ಅಂಗಡಿ ಬಳಿ ತೆರಳಿದ್ದ ನಗರದ ಸಾಮಾಜಿಕ ಕಾರ್ಯಕರ್ತರಾದ ಚೆನ್ನಬಸಪ್ಪ ಮುರುಗೋಡ ಅವರು ಈ ಅಪೂರ್ವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ತಾನು ಬದುಕುವುದರ ಜೊತೆಗೆ ಇನ್ನೊಬ್ಬರ ಅಥವಾ ಇನ್ನೊಂದು ಜೀವಿಯ ಬದುಕಿಗೆ ನೆರವಾಗುವುದೆ ಅರ್ಥಪೂರ್ಣವಾದ ಜೀವನವಲ್ಲವೆ.