ಬೆಂಗಳೂರು: ಸಂಸತ್ ಭವನ ಉದ್ಘಾಟನೆಗೆ(New Parliament Building) ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್ಡಿಕೆ, ಸಂಸತ್ ಭವನ ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಲ್ಲ. ದೇಶದ ತೆರಿಗೆ ಹಣದಿಂದ ಕಟ್ಟಿರುವ ಭವನವದು. ಯಾವುದೇ ಭವನ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಕರೆದ ಉದಾಹರಣೆ ಇಲ್ಲ. ಹೀಗಾಗಿ ಕಾಂಗ್ರೆಸ್ನ(Congress) ವಿರೋಧ ಸರಿ ಇಲ್ಲ ಎಂದು ಕಿಡಿಕಾರಿದರು. ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ(HD Devegowda) ಅವರು ಸಂಸತ್ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹಾಜರಾಗುತ್ತಿದ್ದೇನೆ. ಅದು ದೇಶದ ಆಸ್ತಿ. ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದಿದ್ದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಧ್ವನಿ ಎತ್ತಿದ್ದಾರೆ. ರಾಷ್ಟ್ರಪತಿಯಾಗಿರುವ ಆದಿವಾಸಿ ಮಹಿಳೆಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಧ್ವನಿ ಎತ್ತಿದೆ. ಯಾವುದೇ ಭವನವನ್ನು ಉದ್ಘಾಟನೆ ಮಾಡಬೇಕಾದಾಗ ರಾಷ್ಟ್ರಪತಿ, ರಾಜ್ಯಪಾಲರನ್ನು ಕರೆದ ಉದಾಹರಣೆ ಇಲ್ಲ. ಛತ್ತೀಸ್ಗಢ ವಿಧಾನಸಭೆ ಅಡಿಗಲ್ಲಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಕರೆದಿದ್ದರು. ರಾಜ್ಯಪಾಲರನ್ನು ಕರೆಸಿ ಅಡಿಗಲ್ಲು ಹಾಕಿಸಿರಲಿಲ್ಲ. ಕರ್ನಾಟಕದ ವಿಕಾಸಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಈಗ ರಾಷ್ಟ್ರಪತಿ ಬಗ್ಗೆ ಮಾತನಾಡ್ತಿದ್ದಾರೆ. ಅಂದು ಆದಿವಾಸಿ ಮಹಿಳೆ ಚುನಾವಣೆಗೆ ನಿಂತಾಗ ಕಾಂಗ್ರೆಸ್ ಅಭ್ಯರ್ಥಿಯನ್ನು ಯಾಕೆ ಕಣಕ್ಕಿಳಿಸಿತ್ತು. ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತು. ಈ ರೀತಿಯ ಬೂಟಾಟಿಕೆ ರಾಜಕೀಯ ಬೇಡ. ಪ್ರಧಾನಿ ಮೋದಿ, ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ. ಅದನ್ನು ಗೌರವಿಸಬೇಕೆಂದು ತೀರ್ಮಾನ ಮಾಡಿದ್ದೇವೆ. ಈ ವಿಚಾರದಲ್ಲಿ ಬೆಂಬಲ ನೀಡುತ್ತಿದ್ದೇವೆ ಅನ್ನೋ ಕಾರಣಕ್ಕೆ ಬಿಜೆಪಿ ಜೊತೆಗಿನ ಮೃಧುದೋರಣೆಯಿಲ್ಲ ಎಂದರು.
ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಲಾಗಿದೆ
ಚುನಾವಣೆಗೂ ಮುನ್ನ ಕಾಂಗ್ರೆಸ್ನ ಇದೇ ಸಿದ್ದರಾಮಯ್ಯ ನಿನಗೂ ಫ್ರೀ, ನನಗೂ ಫ್ರೀ ಎಂದ್ರು. ಎಲ್ಲರಿಗೂ ಫ್ರೀ ಫ್ರೀ ಎಂದು ಭಾಷಣದಲ್ಲಿ ಹೇಳಿದ್ದರು. ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರಂಟಿ ಜಾರಿ ಎಂದು ಹೇಳಿದ್ದರು. ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸಲಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೆಚ್ಡಿಕೆ 200 ಯೂನಿಟ್ವರೆಗಿನ ವಿದ್ಯುತ್ ಶುಲ್ಕ ಪಾವತಿಸದಂತೆ ಕರೆ ಕೊಟ್ಟಿದ್ದಾರೆ. ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಅಂದ್ರು. ಈಗ ಗ್ಯಾರಂಟಿಗಳಿಗೆ ಕಂಡೀಷನ್ ಇದೆ ಅಂತಾ ಹೇಳುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮುನ್ನವೇ ಯಾಕೆ ಷರತ್ತುಗಳ ಬಗ್ಗೆ ಹೇಳಿಲ್ಲ. ನಿಮ್ಮ ಕುತಂತ್ರದ ರಾಜಕೀಯಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ ಮುಂದುವರಿಯುತ್ತಾರೆ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಖಿಲ್ ರಾಜೀನಾಮೆ ಬಗ್ಗೆ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಹೆಚ್ಡಿಕೆ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಲ್ಲ. ವಿಧಾನಸಭೆ ಚುನಾವಣೆಯಲ್ಲಿ JDS ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ ಎಂದು ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.