ದಾಂಡೇಲಿ : ನಗರದ ಬರ್ಚಿ ರಸ್ತೆ, ಹಳಿಯಾಳ ರಸ್ತೆಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿಯಲ್ಲಿ ಅಗೆದಿರುವ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ. ಹಳಿಯಾಳ ರಸ್ತೆಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದ್ದ ಹಾಗೂ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದ ಈ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಹೊಂಡಕ್ಕೆ ಹಾಕಲಾದ ಮಣ್ಣಿನ ಸಮತಟ್ಟು ಮಾಡುವ ಕಾರ್ಯವನ್ನು ಇಂದು ಗುರುವಾರ ಬೆಳಿಗ್ಗೆಯಿಂದ ಆರಂಭಿಸಲಾಗಿದೆ. ಇದೇ ರೀತಿ ಬರ್ಚಿ ರಸ್ತೆಯಲ್ಲಿಯೂ ಆದಷ್ಟು ಶೀಘ್ರವಾಗಿ ಅಗೆದಿರುವ ಹೊಂಡವನ್ನು ಮುಚ್ಚುವ ಕಾರ್ಯವಾಗಬೇಕಾಗಿದೆ. ಇನ್ನೂ ಅಗೆದು ಮುಚ್ಚಲಾದ ಹೊಂಡದ ಹತ್ತಿರ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕುವುದು ಅತೀ ಅವಶ್ಯವಾಗಿದೆ. ಯಾಕೆಂದರೆ ಎದುರುಗಡೆಯಿಂದ ಬರುವ ವಾಹನಗಳಿಗೆ ದಾರಿ ಮಾಡಲು ಕೊಡಲು ಹೋಗಿ ಅನೇಕ ವಾಹನಗಳು ಮುಚ್ಚಲ್ಪಟ್ಟ ಹೊಂಡದಲ್ಲಿ ಹೂತು ಹೋಗುವ ಸಾಧ್ಯತೆಯಿದ್ದು, ಈಗಾಗಲೆ ಕೆಲವು ವಾಹನಗಳು ಈ ಸಂಕಷ್ಟವನ್ನು ಅನುಭವಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.