ಹಳಿಯಾಳ : ತಾಲ್ಲೂಕಿನ ಶ್ರೀ. ವಿ.ಆರ್.ಡಿ.ಎಂ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ ಹಾಗೂ ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮತ್ತು ಮೆಷಿನರಿ ಪ್ರೈ.ಲಿ ಧಾರವಾಡ ಇವರ ಸಹಭಾಗಿತ್ವದಲ್ಲಿ ಪಟ್ಟಣದ ಗುತ್ತಿಗೇರಿ ಕೆರೆಯ ಹೂಳೆತ್ತುವ ಕಾಮಗಾರಿಯೂ ಭರದಿಂದ ಸಾಗುತ್ತಿದ್ದು, ಕಾಮಗಾರಿ ಸ್ಥಳಕ್ಕೆ ಇಂದು ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮತ್ತು ಮೆಷಿನರಿ ಪ್ರೈ.ಲಿ ಧಾರವಾಡ ಇಲ್ಲಿಯ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ದೀಕ್ಷಿತ್ ಅವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಶಾಂತ್ ದೀಕ್ಷಿತ್ ಅವರು ಪ್ರತಿಯೊಂದು ಜೀವಿಗಳಿಗೂ ನೀರು ಅತ್ಯವಶ್ಯ. ಕೃಷಿ ಚಟುವಟಿಕೆ, ಉದ್ಯಮ, ಕೈಗಾರಿಕೆಗಳ ಜೊತೆಗೆ ಹಾಗೂ ಮಾನವನಿಂದ ಹಿಡಿದು ಪ್ರತಿಯೊಂದು ಜೀವಿಗೂ ನೀರು ಅತೀ ಅವಶ್ಯ. ಕೆರೆಗಳ ಹೂಳೆತ್ತುವ ಮೂಲಕ ನೈಸರ್ಗಿಕವಾದ ಜಲಧಾರೆಯನ್ನು ಮತ್ತಷ್ಟು ಸಂವರ್ಧನೆ ಮಾಡುವ ಈ ಕಾರ್ಯ ಶ್ಲಾಘನಾರ್ಹ ಕಾರ್ಯವಾಗಿದೆ ಎಂದರು.
ಇಲ್ಲಿಯ ಬೇಟಿಗೂ ಮುನ್ನ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಕಾರ್ಯಾಲಯಕ್ಕೆ ತೆರಳಿದ ಪ್ರಶಾಂತ್ ದೀಕ್ಷಿತ್ ಅವರು ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು ಅವರೊಂದಿಗೆ ಕೆಲ ಹೊತ್ತು ಚರ್ಚಿಸಿ, ಟ್ರಸ್ಟಿನ ಸಮಾಜಮುಖಿ ಕಾರ್ಯಕ್ಕೆ ಸದಾ ಬೆಂಬಲವಿದೆ ಎಂದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ ಚೌವ್ಹಾಣ್ ಹಾಗೂ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.