ನರೇಂದ್ರ ಮೋದಿ ಆಸ್ಟ್ರೇಲಿಯಾ ಭೇಟಿ: ಭಾರತದ ಪ್ರಧಾನಿಯನ್ನು ಹಾಡಿಹೊಗಳಿದ ಸಿಇಒಗಳು

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 3 ದಿನಗಳ ಆಸ್ಟ್ರೇಲಿಯಾ ಭೇಟಿ ಆರಂಭಿಸಿದ್ದು, ಈ ಸಂಬಂಧ ಮೇ 23, ಮಂಗಳವಾರದಂದು ಆಸ್ಟ್ರೇಲಿಯಾದ ವಿವಿಧ ಉದ್ಯಮ ನಾಯಕರನ್ನು ಭೇಟಿಯಾಗಿದ್ದಾರೆ. ಆಸ್ಟ್ರೇಲಿಯಾದ ಫಾರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ನ ಎಕ್ಸಿಕ್ಯೂಟಿವ್ ಛೇರ್ಮನ್ ಆಂಡ್ರ್ಯೂ ಫಾರೆಸ್ಟ್, ಆಸ್ಟ್ರೇಲಿಯ್ಸೂಪರ್ ಕಂಪನಿಯ ಸಿಇಒ ಪೌಲ್ ಶ್ರೋಡರ್ ಮೊದಲಾದವರು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಮತ್ತು ವ್ಯವಹಾರಶೀಲತೆಗೆ ತಲೆದೂಗಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಫ್ಯೂಚರ್ ಇಂಡಸ್ಟ್ರೀಸ್ ಎಕ್ಸಿಕ್ಯೂಟಿವ್ ಛೇರ್ಮನ್ ಆಂಡ್ರ್ಯೂ ಫಾರೆಸ್ಟ್ ಅವರು, ಭಾರತದ ಗ್ರೀನ್ ಹೈಡ್ರೋಜನ್ ಮಿಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳೊಂದಿಗೆ ತಮ್ಮ ಸಂಸ್ಥೆ ಕೆಲಸ ಮಾಡಲು ಇಚ್ಛಿಸುತ್ತಿರುವುದಾಗಿ ಅವರು ಪ್ರಧಾನಿ ಮೋದಿ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಮೋದಿ ಸ್ವಾಗತಿಸಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಆಂಡ್ರ್ಯೂ ಫಾರೆಸ್ಟ್, ನರೇಂದ್ರ ಮೋದಿ ಅವರ ನಿಜವಾದ ಗ್ಲೋಬಲ್ ಲೀಡರ್ ಎಂದು ಹೊಗಳಿದ್ದಾರೆ.
ಇನ್ನು, ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಆಸ್ಟ್ರೇಲಿಯನ್ಸೂಪರ್ ಕಂಪನಿಯ ಸಿಇಒ ಪೌಲ್ ಶ್ರೋಡರ್ ಕೂಡ ಪ್ರಭಾವಗೊಂಡಿದ್ದಾರೆ. ಮೋದಿಯೊಂದಿಗಿನ ಭೇಟಿಯಿಂದ ಬಹಳ ಖುಷಿಯಾಯಿತು. ಅವರಿಗೆ ವ್ಯವಹಾರದ ಅರಿವಿರುವುದು ಇನ್ನೂ ಉತ್ತೇಜನಕಾರಿ ಎನಿಸಿತು. ಪ್ರಧಾನಿಗಳು ಭಾರತಕ್ಕಾಗಿ ತಮಗಿರುವ ಕನಸುಗಳ ಬಗ್ಗೆ ಮಾತನಾಡಿದ್ದು ಬಹಳ ದೊಡ್ಡ ಸಂದೇಶ ಕೊಟ್ಟಿತ್ತು ಎಂದು ಪೌಲ್ ಶ್ರಾಡರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 3 ರಾಷ್ಟ್ರಗಳ ಪ್ರವಾಸದಲ್ಲಿ ಆಸ್ಟ್ರೇಲಿಯಾ ಭೇಟಿ ಕೊನೆಯದ್ದು. ಮೊದಲಿಗೆ ಜಪಾನ್ಗೆ ಹೋದ ಮೋದಿ, ಬಳಿಕ ಪಪುವಾ ನ್ಯೂಗಿನಿಗೆ ಹೋಗಿ ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಗೆ ಆಗಮಿಸಿದ್ದಾರೆ.