ಸುಂದರ್ ಪಿಚ್ಚೈಯವರ ಚೆನ್ನೈ ಮನೆ ಮಾರಾಟ- ಕಣ್ಣೀರಿಟ್ಟ ಗೂಗಲ್ ಸಿಇಓ ತಂದೆ

ಚೆನ್ನೈ: ಗೂಗಲ್ ಸಿಇಓ ಸುಂದರ್ ಪಿಚ್ಚೈ ಅವರ ಚೆನ್ನೈನಲ್ಲಿರುವ ಮನೆಯನ್ನು ಮಾರಾಟ ಮಾಡಲಾಗಿದ್ದು, ಮನೆ ಹಸ್ತಾಂತರ ಮಾಡುವಾಗ ಸುಂದರ್ ಅವರ ತಂದೆ ರಘುನಾಥ್ ಭಾವುಕರಾಗಿದ್ದಾರೆ.
ಈ ಮನೆ ಚೆನ್ನೈನ ಅಶೋಕ್ ನಗರದಲ್ಲಿದ್ದು, ತಮಿಳು ನಟ ಹಾಗೂ ನಿರ್ಮಾಪಕ ಸಿ ಮಣಿಕಂದನ್ ಖರೀದಿಸಿದ್ದಾರೆ. ಮಣಿಕಂದನ್ ಅವರು ಖರೀದಿಸಲು ಆಸ್ತಿಯನ್ನು ಹುಡುಕುತ್ತಿದ್ದರು. ಇದೇ ವೇಳೆ ಸುಂದರ್ ಪಿಚ್ಚೈ ಅವರು ಹುಟ್ಟಿ ಬೆಳೆದ ಮನೆ ಮಾರಾಟಕ್ಕೆ ಇದೆ ಎಂಬ ವಿಚಾರ ತಿಳಿದ ತಕ್ಷಣ ಅವರು ಖರೀದಿ ಮಾಡುವ ನಿರ್ಧಾರ ಮಾಡಿದರು.

ಈ ಸಂಬಂಧ ಮಣಿಕಂದನ್ ಪ್ರತಿಕ್ರಿಯಿಸಿ, ಸುಂದರ್ ಪಿಚ್ಚೈ ಅವರು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಇದೀಗ ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸುವುದು ನನ್ನ ಜೀವನದ ಹೆಮ್ಮೆಯ ಸಾಧನೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ಗೂಗಲ್ ಸಿಇಓ ಕುಟುಂಬದ ಸರಳತೆಯನ್ನು ಕೊಂಡಾಡಿದ ನಟ, ಸುಂದರ್ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ತಂದು ಕೊಟ್ಟರು. ಅವರ ತಂದೆ ನನಗೆ ಎಲ್ಲಾ ದಾಖಲೆಗಳನ್ನು ನೀಡಿದರು. ಅವರ ಸರಳತೆ ನನ್ನನ್ನು ಅಚ್ಚರಿ ಹುಟ್ಟಿಸುವಂತೆ ಮಾಡಿತು ಎಂದರು. ರಿಜಿಸ್ಟ್ರಾರ್ ಕಚೇರಿಯಲ್ಲಿ ಅವರ ಮಗನ ಹೆಸರು ಹೇಳಿದರೆ ಎಲ್ಲಾವೂ ಬೇಗನೆ ಮುಗಿದುಗೋಗುತ್ತಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಾವೇ ನೋಂದಣಿ ಕಚೇರಿಯಲ್ಲಿ ಗಂಟಗಟ್ಟಲೆ ಕಾದು ಎಲ್ಲಾ ತೆರಿಗೆಗಳನ್ನು ಪಾವತಿಸಿದರು. ಸುಂದರ್ ಅವರ ತಂದೆಯವರದ್ದು ಇದು ಮೊದಲ ಆಸ್ತಿಯಾಗಿರುವುದರಿಂದ ದಾಖಲೆಗಳನ್ನು ಹಸ್ತಾಂತರಿಸುವಾಗ ಕೆಲವು ನಿಮಿಷಗಳ ಕಾಲ ಭಾವುಕರಾದರು ಎಂದು ತಿಳಿಸಿದರು.


ಸುಂದರ್ ಪಿಚ್ಚೈ ಅವರು ಚೆನ್ನೈನಲ್ಲಿ ಬೆಳೆದರು. ಆದರೆ ಅವರು 1989 ರಲ್ಲಿ ಐಐಟಿ ಖರಗ್‍ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಲು ತೆರಳಿದರು. ಅವರು 20 ವರ್ಷದವರೆಗೆ ಈ ಮನೆಯಲ್ಲಿಯೇ ವಾಸವಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಡಿಸೆಂಬರ್‍ನಲ್ಲಿ ಗೂಗಲ್ ಸಿಇಒ ಚೆನ್ನೈಗೆ ಭೇಟಿ ನೀಡಿದಾಗ ಭದ್ರತಾ ಸಿಬ್ಬಂದಿಗೆ ನಗದು ಮತ್ತು ಕೆಲವು ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು.