ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaia) ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ವಹಿಸಲಿದ್ದಾರೆ. ನಾಳೆ ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ.
ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ನೂತನ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವುದರಿಂದ ಈಗಾಗಲೇ ಎಲ್ಲಾ ರೀತಿಯ ಸಿದ್ಧತಾ ಕ್ರಮಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕಂಠೀರವ ಕ್ರೀಡಾಂಗಣ ಸುತ್ತಲೂ ಅಸಂಖ್ಯಾತ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಕಂಠೀರವ ಸ್ಟೇಡಿಯಂಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ನಾಳಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಕಂಠೀರವ ಕ್ರೀಡಾಂಗಣದಲ್ಲಿ ಎಂಟು ಜನ ಡಿಸಿಪಿಗಳ ನೇತೃತ್ವದಲ್ಲಿ 1500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕಂಠೀರವ ಸ್ಟೇಡಿಯಂನ ಐದು ಗೇಟ್ ಗಳ ಪೈಕಿ ಎರಡು ಗೇಟ್ ಗಳಲ್ಲಿ ಜನರಿಗೆ ಬರಲು ಅವಕಾಶ ನೀಡಲಾಗಿದೆ.
ಯಾರ್ಯಾರಿಗೆ ಎಲ್ಲಿ ಪ್ರವೇಶ?
ನಾಳೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಎಲ್ಲಾ ರೀತಿಯ ಪ್ಲಾನ್ ಮಾಡಲಾಗಿದ್ದು, ಗೇಟ್ ನಂಬರ್ 1ರಲ್ಲಿ ವಿಐಪಿಗಳಿಗೆ ಅವಕಾಶ ನೀಡಿದ್ರೆ, ಕಾಫಿ ಡೇ ಗೇಟ್ 2ರಲ್ಲಿ ವಿವಿಪಿಗಳಿಗೆ ಅವಕಾಶ ನೀಡಲಾಗಿದೆ. ಗೇಟ್ ನಂಬರ್- 3 ಮತ್ತು 4 ಸಾರ್ವಜನಿಕರಿಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಇತ್ತ ಸಂಚಾರಿ ವಿಭಾಗದ ಮುಖ್ಯಸ್ಥ ಸಲೀಂ ಅವರು ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಸಿಎಂ ನಿವಾಸಕ್ಕೆ ಬೆಂಬಲಿಗರ ದಂಡು
ಇನ್ನು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬೆಂಬಲಿಗರು ಮತ್ತು ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಆಗಮಿಸುತ್ತಿದ್ದು, ಗಾಂಧಿ ಭವನ ರಸ್ತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಸಿದ್ದರಾಮಯ್ಯಗೆ ವಾದ್ಯಗೋಷ್ಠಿ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.