ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಇಬ್ಬರ ನೇಮಕ, ಪ್ರಮಾಣವಚನ ಬೋಧಿಸಿದ ಡಿವೈ ಚಂದ್ರಚೂಡ್

ದೆಹಲಿ: ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿಗಳಾಗಿ ಇಬ್ಬರನ್ನು ನೇಮಕ ಮಾಡಲಾಗಿದೆ, ನೆನ್ನೆ (ಮೇ 18) ದ್ರೌಪದಿ ಮುರ್ಮು ಅವರು ಆದೇಶಕ್ಕೆ ಸಹಿ ಹಾಕಿದ್ದು, ಇಂದು (ಮೇ19) ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಮಣ ವಿಶ್ವನಾಥನ್ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದ್ದು, ಇದೀಗ ಸುಪ್ರೀಂ ಕೋರ್ಟ್ ಇಬ್ಬರು ಹೊಸ ನ್ಯಾಯಾಧೀಶರನ್ನು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಈಗ 34 ನ್ಯಾಯಾಧೀಶರ ಪೂರ್ಣ ಬಲವನ್ನು ಹೊಂದಿದೆ ಎಂದು ಹೇಳಲಾಗಿದೆ.

ನ್ಯಾಯಮೂರ್ತಿ ಮಿಶ್ರಾ ಮತ್ತು ವಿಶ್ವನಾಥನ್ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಆದೇಶ ಪ್ರತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಗುರುವಾರ ಹೊರಡಿಸಲಾಗಿದೆ. ಈ ಬಗ್ಗೆ ನೂತನವಾಗಿ ಆಯ್ಕೆಯಾಗಿರುವ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಟ್ವಿಟರ್‌ನಲ್ಲಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇವರನ್ನು ಆಯ್ಕೆ ಮಾಡುವ ಬಗ್ಗೆ ಮೇ 16 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ನೇಮಕಕ್ಕೆ ಶಿಫಾರಸು ಮಾಡಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಕೆಎಂ ಜೋಸೆಫ್, ಅಜಯ್ ರಸ್ತೋಗಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಕೊಲಿಜಿಯಂ ಶಿಫಾರಸು ಮಾಡುವಾಗ ಸುಪ್ರೀಂ ಕೋರ್ಟ್ ಪೀಠಕ್ಕೆ ನೇರವಾಗಿ ನೇಮಕಗೊಂಡದ್ದು ಇವರು ಒಬ್ಬರೇ ಎಂದು ಹೇಳಲಾಗಿದೆ. ಹಿರಿಯ ಮತ್ತು ಸಹ ನ್ಯಾಯಮೂರ್ತಿಗಳ ಅಭಿಪ್ರಾಯದಂತೆ, ಹಿರಿಯ ವಕೀಲರಾದ ಕೆವಿ ವಿಶ್ವನಾಥನ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿದೆ.