ತಾರಕಕ್ಕೇರಿದ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬೆಂಬಲಿಗರ ಜಟಾಪಟಿ, ಮುಸಿಮುಸಿ ನಗುತ್ತಿರುವ ಬಿಜೆಪಿ ಕಾರ್ಯಕರ್ತರು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Assembly Elections Result 2023) ಪ್ರಕಟಗೊಂಡು ಮೂರು ದಿನಗಳು ಕಳೆದಿವೆ. ಆದರೂ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್​ ಇದುವರೆಗೂ ಸಿಎಂ ಯಾರು ಎನ್ನುವುದನ್ನು ಘೋಷಣೆ ಮಾಡಿಲ್ಲ. ಸಿಎಂ ಕುರ್ಚಿಗಾಗಿ ಪಟ್ಟು ಅಂದ್ರೆ ಪಟ್ಟು. ಸಿದ್ದರಾಮಯ್ಯ ಬಿಡುತ್ತಿಲ್ಲ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸಹ ಸೈಡಿಗೆ ಸರಿಯುತ್ತಿಲ್ಲ. ಹೀಗಾಗಿ ಹೈಕಮಾಂಡ್​ಗೂ ಸಿಎಂ ಆಯ್ಕೆ ಕಗ್ಗಂಟಾಗಿದೆ. ಈ ನಡುವೆ 2 ಪ್ರಬಲ ಜಾತಿಗಳು ಹೋರಾಟಕ್ಕಿಳಿದಿವೆ. ಸಿದ್ದರಾಮಯ್ಯ ಪರ ಕುರುಬ ಸಮುದಾಯ ಸೇರಿದಂತೆ ಕೆಲ ಹಿಂದೂಳಿದ ಸಮುದಾಯಗಳು ಬ್ಯಾಟ್ ಬೀಸಿದ್ರೆ, ಇತ್ತ ಕನಕಪುರ ಬಂಡೆ ಡಿಕೆ ಶಿವಕುಮಾರ್​ ಪರ ಒಕ್ಕಲಿ ಸಮುದಾಯ ನಿಂತಿದೆ. ಈ ಎರಡು ಸಮುದಾಯದ ಜನರು ಸಾಮಾಜಿಕ ತಾಲತಾಣಗಳಲ್ಲಿ ಪರಸ್ಪರ ಕಿತ್ತಾಟಕ್ಕಿಳಿದಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರಲ್ಲೂ ಸಹ ಜಟಾಪಟಿ ನಡೆದಿವೆ. ಇವರಿಬ್ಬರ ಮಧ್ಯೆ ಬಿಜೆಪಿ ಕಾರ್ಯಕರ್ತರು ಸಹ ಎಂಟ್ರಿಕೊಟ್ಟು ಯಾರಾದರೂ ಸಿಎಂ ಆಗಲಿ ಮೊದಲು ಗ್ಯಾರಂಟಿ ಬರಲಿ ಎನ್ನುತ್ತಿದ್ದಾರೆ.ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಟ್ರೋಲ್‌ಗಳಿಗೆ ಆಹಾರವಾಗುತ್ತಿದೆ. ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರು ಪೋಸ್ಟ್ ಹಾಕಿ ಟ್ರೋಲ್ ಮಾಡಲಾಗುತ್ತಿದೆ. ‘ಜಲ್ದಿ ಸರ್ಕಾರ ಸ್ಟಾರ್ಟ್ ಮಾಡ್ರಿಪಾ ಜನ ವೋಟ್ ಹಾಕಿರೋದು ಉಚಿತ ಭಾಗ್ಯ ಪಡಿಯೋಕೆ’ ಯಾರು ಸಿಎಂ ಆಗ್ತೀರಿ ಅಂತಾ ನೋಡೋಕಲ್ಲ ಎನ್ನುವ ಪೋಸ್ಟ್ ವೈರಲ್ ಆಗುತ್ತಿದೆ. ಇನ್ನು ‘ಗ್ಯಾರಂಟಿಗೆ ಗೋರಂಟಿ ಹಚ್ಚಿಕೊಂಡು ಕರುನಾಡು ಕಾಯ್ತಿದೆ’ ಎನ್ನುವ ಪೋಸ್ಟ್ ಹರಿದಾಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯುತ್ತಿರುವ ಬಿಜೆಪಿ ಬೆಂಬಲಿಗರು, ಲಿಂಗಾಯತರನ್ನು ಬಿಜೆಪಿ ಮೇಲೆ ಎತ್ತಿ ಕಟ್ಟಿದ ಕಾಂಗ್ರೆಸಿಗರೇ ಅತಿಹೆಚ್ಚು ಸ್ಥಾನ ಗೆದ್ದಿರುವ ಲಿಂಗಾಯತರನ್ನು ಸಿಎಂ ಮಾಡಿ ಎಂದು ಪೋಸ್ಟ್ ಮಾಡಿ ಪ್ರಶ್ನೆಸಿದ್ದಾರೆ.ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಗಳು ಆಗುತ್ತಿವೆ. ಅಲ್ಲದೇ ಈ ಕಾಂಗ್ರೆಸ್ ಟ್ರೋಲ್​ ಒಳಗಾಗಿತ್ತಿದೆ. ಮುಖ್ಯವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಬಲಿಗರು ನಿರಂತರ ಪೋಸ್ಟ್​ಗಳ ಮೇಲೆ ಪೋಸ್ಟ್ ಹಾಕುತ್ತಿದ್ದಾರೆ. ತಮ್ಮ ನಾಯಕ ಸಿಎಂ ಆಗ್ಬೇಕು ಎಂದು ಸಿದ್ದರಾಮಯ್ಯನವರ ಅಭಿಮಾನಿಗಳು ಹೇಳುತ್ತಿದ್ದರೆ, ಇಲ್ಲ ಈಗಾಗಲೇ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದಾರೆ. ಈ ಗ ಡಿಕೆ ಶಿವಕುಮಾರ್​ ಆಗಲಿ ಎಂದು ಹೇಳುತ್ತಿದ್ದಾರೆ.ಅಲ್ಲದೇ ಇದರ ನಡುವೆ ಮೂಲ ಕಾಂಗ್ರೆಸ್ಸಿಗ ಹಾಗೂ ವಲಸೆ ಕಾಂಗ್ರೆಸ್ಸಿಗ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಬಂದ ಬಂದವರಿಗೆ ಸಿಎಂ ಮಾಡಿಕೊಂಡು ಹೋದ್ರೆ ಮೂಲ ಕಾಂಗ್ರೆಸ್ಸಿಗರು ಏನು ಮಾಡಬೇಕು ಎನ್ನುವ ವಾದಗಳು ಶುರುವಾಗಿವೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೆಂಬಲಿಗರು ನಿರಂತರ ಪೋಸ್ಟ್​ಗಳ ಮೇಲೆ ಪೋಸ್ಟ್ ಹಾಕುತ್ತಿದ್ದಾರೆ. ಇಬ್ಬರು ನಾಯಕರ ಬೆಂಬಲಗರ ನಡುವಿನ ಕಿತ್ತಾಟ ತಾರಕಕ್ಕೇರುತ್ತಿದ್ದು, ಇದಕ್ಕೆ ಕಾಂಗ್ರೆಸ್ ಬ್ರೇಕ್ ಹಾಕಬೇಕಿದೆ. ಇದು ಹೀಗೆ ಮುಂದುವರಿದರೆ ಕಾಂಗ್ರೆಸ್​ಗೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಕೊಡುವ ಸಾಧ್ಯತೆಗಳಿವೆ.