ಅಂಕೋಲಾ: ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ರಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದಿದೆ. ಅಲಗೇರಿಯ ಸಂಯುಕ್ತ ಪ್ರೌಢ ಶಾಲೆಯ ಗುಮಾಸ್ತ ಗುರುದಾಸ ವಿಷ್ಣು ನಾಯ್ಕ(53) ಮೃತ ವ್ಯಕ್ತಿಯಾಗಿದ್ದು ಕಳೆದ ಕೆಲ ದಿನಗಳಿಂದ ಚಳಿ ಜ್ವರ ಹಾಗೂ ಸಾಮಾನ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಈತ ದಿನಾಂಕ 15 ಮೇ 2023 ರಂದು ತನ್ನ ಕರ್ತವ್ಯಕ್ಕೆ ರಜೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ,ಸೋಮವಾರ ಮಧ್ಯಾಹ್ನ ತನ್ನ ಮನೆಯಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಅಕಸ್ಮಾತ್ ರಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ.
ತಕ್ಷಣ ಆತನ ಕುಟುಂಬಸ್ಥರು ಮತ್ತು ಅಕ್ಕಪಕ್ಕದ ಮನೆಯವರು ಸೇರಿ ಆಟೋ ರಿಕ್ಷಾದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದಾಗಿ ಖಚಿತಪಡಿಸಿದರು ಎಂದು ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿ.ಎಸ್. ಐ ಕುಮಾರ ಕಾಂಬಳೆ ಪ್ರಕರಣ ದಾಖಲಿಸಿದ್ದಾರೆ. ಮೃತ ಗುರುದಾಸ ಈ ಹಿಂದೆ ಅಂಕೋಲಾ, ಕಲ್ಲೇಶ್ವರ,ಕುಮಟಾ ಡಯಟ್, ಅಮದಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ಇನ್ನಿತರ ಕಡೆ ಸುದೀರ್ಘ ಸೇವೆ ಸಲ್ಲಿಸಿದ್ದು ಪ್ರಸ್ತುತ ಅಲಗೇರಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಅತಿ ಆತ್ಮೀಯ ಸಂಬಂಧ ಹೊಂದಿದ್ದ ಈತ ತನ್ನ ಹಾಸ್ಯ ಮನೋಭಾವದಿಂದ ಎಲ್ಲರನ್ನು ಸೆಳೆಯುವ ಗುಣ ಹೊಂದಿದ್ದರು.
ಗುರುದಾಸ ಇವರ ಅಕಾಲಿಕ ನಿಧನಕ್ಕೆ ಅಲಗೇರಿ ಪೌಢ ಶಾಲೆಯ ಮುಖ್ಯಾಧ್ಯಾಪಕರು, ಸಹಶಿಕ್ಷಕರು, ಪೋಷಕರು, ಊರ ನಾಗರಿಕರು, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.