ಮತಗಟ್ಟೆಯತ್ತ ಸುಳಿಯದ ಮತದಾರರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ

ಮೈಸೂರು: ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ(Karnataka Assembly Elections 2023). ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತ ಚಲಾಯಿಸುವ ಮೂಲಕ ಇಡೀ ರಾಜ್ಯ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಆದ್ರೆ ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಗ್ರಾಮಸ್ಥರು ಮತ ಹಾಕುವುದಿಲ್ಲ ಎಂದು ಮತದಾನ ಬಹಿಷ್ಕರಿಸಿದ್ದಾರೆ. ಮೈಸೂರು ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳಿಗೆಹುಂಡಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದು ಚುನಾವಣಾ ಅಧಿಕಾರಿಗಳು ಮನವೊಲಿಸಲು ಮುಂದಾಗಿದ್ದಾರೆ. ಇಂದು ಮತದಾನ ಹಿನ್ನೆಲೆ ಚುನಾವಣೆ ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಬೆಳಗ್ಗೆ 7 ಗಂಟೆಯಿಂದಲೂ ಕಾಯುತ್ತಿದ್ದಾರೆ. ಆದ್ರೆ ಇದುವರೆಗೂ ಒಬ್ಬ ಮತದಾರನೂ ಮತಗಟ್ಟೆಗೆ ಭೇಟಿ ನೀಡಿಲ್ಲ. ಅದರಲ್ಲೂ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಸಹ ಮತಗಟ್ಟೆಯತ್ತ ತಲೆ ಹಾಕಿಲ್ಲ. ಇಡೀ ಗ್ರಾಮವೇ ಮತದಾನ ಬಹಿಷ್ಕರಿಸಿದೆ.

ನಾವ್ಯಾಕೆ ವೋಟ್ ಹಾಕಬೇಕು. ತಮ್ಮ 5 ವರ್ಷ ಅವಧಿಯಲ್ಲಿ ಒಂದು ರೋಡ್ ಸಹ ಮಾಡಿಸಿಲ್ಲ. ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ ಎಂದ ಮೇಲೆ ವೋಟ್ ಯಾಕೆ ಮಾಡಬೇಕು. ಯುಜಿಡಿ ಮಾಡಿಸಿಲ್ಲ, ಒಂದು ರಸ್ತೆ ಮಾಡಿಕೊಟ್ಟಿಲ್ಲ ಹಾಗಾಗಿ ನಾವು ಯಾರಿಗೂ ವೋಟ್ ಮಾಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಈ ನಡುವೆ ಗ್ರಾಮಸ್ಥರ ಮನವೊಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದು ಗ್ರಾಮಸ್ಥರು ಮಾತ್ರ ಯಾವುದಕ್ಕೂ ಒಪ್ಪುತ್ತಿಲ್ಲ. ನಮ್ಮದು ಕೊನೆಯ ಗ್ರಾಮ ಎಂದು ಯಾರು ತಿರುಗಿಯೂ ನೋಡಲ್ಲ. ಈ ಹಿನ್ನೆಲೆ ನಾವೆಲ್ಲ ವೋಟ್ ಮಾಡಬಾರದು ಎಂದು ಡಿಸೈಡ್ ಮಾಡಿದ್ದೇವೆ ಎಂದು ಅಧಿಕಾರಿಗಳಿಗೆಯೇ ತಿಳಿ ಹೇಳಿ ಕಳಿಸಿದ್ದಾರೆ. ಇತ್ತ ಮತದಾರರು ಬಾರದೆ ಚುನಾವಣೆ ಅಧಿಕಾರಿಗಳು ಸುಮ್ಮನೆ ಕುಳಿತಿರುವ ದೃಶ್ಯಗಳು ಕಂಡು ಬಂದಿದೆ.