ನವದೆಹಲಿ: ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನು ರದ್ದುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ವಿಚಾರಣೆ ನಡೆಸಲಿದೆ.
ಮಾ. 27ರಂದು ಕರ್ನಾಟಕ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 4% ಓಬಿಸಿ ಮೀಸಲಾತಿಯನ್ನು ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಎಲ್. ಗುಲಾಮ್ ರಸೂಲ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಏ. 13ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮೀಸಲಾತಿ ರದ್ದುಗೊಳಿಸಿರುವುದು ಮೇಲ್ನೋಟಕ್ಕೆ ದೋಷಪೂರಿತ ಹಾಗೂ ಪ್ರಮಾದದಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಆದೇಶದಿಂದ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದ್ದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಷ್ಯಂತ್ ದವೆ, ರವಿಕುಮಾರ್ ಹಾಗೂ ಗೋಪಾಲ್ ಶಂಕರನಾರಾಯಣನ್ ಮೀಸಲಾತಿ ರದ್ದು ಮಾಡಿರುವ ನಿರ್ಧಾರ ದೋಷಪೂರಿತವಾಗಿದೆ ಎಂದು ವಾದ ಮಂಡಿಸಿದ್ದರು.
ಮುಂದಿನ ವಿಚಾರಣೆಯವರೆಗೂ ಹಳೆಯ ನಿಯಮವನ್ನು ಮುಂದುವರಿಸುವಂತೆ ಕೋರ್ಟ್ ಆದೇಶಿಸಿತ್ತು. ಈ ವೇಳೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಲು ಸಮಯ ಕೇಳಿತ್ತು. ಹೀಗಾಗಿ ಇಂದು ನ್ಯಾಯಮೂರ್ತಿ ಕೆ.ಎಂ ಜೋಸೆಫ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.