ಯುವಕನೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಮೃತ

ಮುಂಡಗೋಡ:ತಾಲೂಕಿನ ನ್ಯಾಸರ್ಗಿ ಗ್ರಾಮದ ಯುವಕನೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಕಿರಣ ಮೇದಾರ(22) ಮೃತ ಯುವಕ. ಈತನು ಬೈಕ್‌ನಲ್ಲಿ ಪಟ್ಟಣದಿಂದ ನ್ಯಾಸರ್ಗಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಗಂಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾಲುವೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದನು. ಈತನನ್ನು ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಬಾಚಣಕಿ ಗ್ರಾಮದ ಕ್ರಾಸ್ ಹತ್ತಿರ ಈತನು ಮೃತಪಟ್ಟಂತೆ ಕಂಡು ಬಂದಿದ್ದು ಆದರೂ ಬದುಕಬಹುದು ಎಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಯುವಕ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈ ಕುರಿತು ವೆಂಕಟೇಶ ಮೇದಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.