ಪಣಜಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಗೋವಾಕ್ಕೆ ಆಗಮಿಸಿದ್ದಾರೆ.
ಕಳೆದ 12 ವರ್ಷಗಳಿಂದ ಭಾರತಕ್ಕೆ ಪಾಕಿಸ್ತಾನದಿಂದ ಯಾವುದೇ ವಿದೇಶಾಂಗ ಸಚಿವರು ಭೇಟಿ ನೀಡಿರಲಿಲ್ಲ. ಇದೀಗ ಬುಲಾವಲ್ ಭುಟ್ಟೋ ಅವರು 12 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಮೊದಲ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಗಡಿಯಾಚೆಗೆ ಭಯೋತ್ಪಾದಕರ ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳಿಂದಾಗಿ ಉಭಯ ದೇಶಗಳ ನಡುವೆ ಸಂಘರ್ಷಗಳು ಮುಂದುವರಿದ ಒತ್ತಡದ ನಡುವೆಯೇ ಭುಟ್ಟೋ ಭಾರತಕ್ಕೆ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭುಟ್ಟೋ, ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲು ಗೋವಾಗೆ ಬಂದಿರುವುದು ಹಾಗೂ ಈ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ವಿದೇಶಾಂಗ ಸಚಿವರ ಸಭೆ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಭುಟ್ಟೋ ಜರ್ದಾರಿ 2 ದಿನಗಳ ಗೋವಾ ಭೇಟಿಯಲ್ಲಿದ್ದರೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆಗೆ ಪಾಕಿಸ್ತಾನದ ಕಡೆಯಿಂದ ಯಾವುದೇ ಮನವಿ ಬಂದಿಲ್ಲ. ಈ ಕಾರಣ ದ್ವಿಪಕ್ಷೀಯ ಸಭೆಯ ಯೋಜನೆ ಇಲ್ಲ ಎನ್ನಲಾಗಿದೆ.
ಗೋವಾದ ವಿಮಾನ ನಿಲ್ದಾಣಕ್ಕೆ ಬಿಲಾವಲ್ ಭುಟ್ಟೋ ಆಗಮಿಸಿದಾಗ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಸ್ವಾಗತಿಸಿದರು.