ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದಸಾಗುವಾನಿ ಕಟ್ಟಿಗೆ ತುಂಡುಗಳನ್ನುವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು

ಮುಂಡಗೋಡ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸಾಗುವಾನಿ ಕಟ್ಟಿಗೆಯನ್ನು ಅರಣ್ಯ ಇಲಾಖೆಯವರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ತಾಲೂಕಿನ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.
ಕಳಕಿಕಾರೆ ಗ್ರಾಮದ ಗೌಳಿ ಸಮುದಾಯದ ಬಿಜೆಪಿ ಮುಖಂಡ ಸಚಿವರ ಆಪ್ತರಲ್ಲಿ ಗುರುತಿಸಿಕೊಂಡ ದೇವು ಪಾಟೀಲ ಅವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸಾಗುವಾನಿ ಕಟ್ಟಿಗೆ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮದ ಹತ್ತಿರವಿರುವ ಅರಣ್ಯದಿಂದ ಅಕ್ರಮವಾಗಿ ಹಸಿ ಸಾಗುವಾನಿ ಮರಗಳನ್ನು ಕಡಿದು ಅವುಗಳನ್ನು ತುಂಡು ಮಾಡಿ ಮನೆಯಲ್ಲಿ ಸಂಗ್ರಹಿಸಲಾದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ 1ಲಕ್ಷ 50ಸಾವಿರ ರೂ. ಮೌಲ್ಯದ ಕಟ್ಟಿಗೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಎಫ್‌ಒ ಎಸ್.ಜಿ.ಹೆಗಡೆ, ಎಸಿಎಫ್ ಎಸ್.ಎಂ.ವಾಲಿ, ಆರ್‌ಎಫ್‌ಒ ಸುರೇಶ ಕುಳ್ಳೊಳ್ಳಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ಕುರುಬರ, ಶ್ರೀಶೈಲ ಐನಾಪೂರ, ಅರಣ್ಯ ರಕ್ಷಕರಾದ ಬಸವರಾಜ ನಾಯ್ಕ, ನಿಸಾರ್, ಮಂಜು ಪೂಜಾರ, ನಾರಾಯಣಸಿಂಗ್, ವೀಕ್ಷಕರಾದ ಅಶೋಕ ಮೇಲಿನಮನಿ, ನಾಸಿರ್, ಅಬ್ದುಲ್ ಮುಸ್ತಾಕ್, ಗಣಪತಿ, ಶಕೀಲ, ನಾಗರಾಜ ಕಾರ್ಯಾಚರಣೆಯಲ್ಲಿ ಇದ್ದರು.