ಶಿರಸಿ: ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಾಡದು. ಸುಪ್ರಿಂಕೋರ್ಟ್ ನಿರ್ಣಯ ಬರುವವರೆಗೂ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆಗೂ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ನಗರಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಅರಣ್ಯ ಭೂಮಿ ಹೆಚ್ಚಿರುವ ಉತ್ತರ ಕನ್ನಡದಲ್ಲಿ ಪರಿಸರ ರಕ್ಷಣೆ ಜತೆಗೆ ಅಭಿವೃದ್ಧಿ ಕೈಗೊಳ್ಳುವ ಸವಾಲು ಇದೆ. ಕಳಚೆ ಗ್ರಾಮದಲ್ಲಿ ಭೂಕುಸಿತ ಉಂಟಾಗದಂತೆ ಕ್ರಮವಹಿಸಲಾಗುವುದು. ಅರಣ್ಯ ಮರು ನಿರ್ಮಾಣ ಮಾಡಲಾಗುವುದು. ಪುನರ್ವಸತಿಗೆ ಹೆಚ್ಚಿನ ಅನುದಾನ ಕೊಡಲಾಗುವುದು’ ಎಂದು ಭರವಸೆ ನೀಡಿದರು.
ಇನ್ನೂ ರಾಜ್ಯದಲ್ಲಿ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು. ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಘೋಷಿಸಲಾಗುವುದು. ತೋಟಗಾರಿಕೆ, ಅರಣ್ಯ ಕಾಲೇಜು ಇಲ್ಲಿದೆ. ಇವುಗಳನ್ನು ವಿಲೀನಗೊಳಿಸಿ ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಸೇರಿದಂತೆ ಪರಿಸರ ಪೂರಕ ಅಧ್ಯಯನಗಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.