ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ನಿಧನ

ನವದೆಹಲಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಶರದ್ ಯಾದವ್ (75) ನಿಧನರಾಗಿದ್ದಾರೆ. ನಿನ್ನೆ ರಾತ್ರಿ ದೆಹಲಿಯ ಛತ್ತರ್‌ಪುರ ನಿವಾಸದಲ್ಲಿ ಹಠಾತ್ ಕುಸಿದು ಬಿದ್ದರು. ಕೂಡಲೇ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ. ಅವರ ನಿಧನದ ಬಗ್ಗೆ ಪುತ್ರಿ ಸುಭಾಷಿಣಿ ಯಾದವ್, ‘ಅಪ್ಪ ಇನ್ನಿಲ್ಲ’ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶರದ್ ಯಾದವ್ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. 2003 ರಲ್ಲಿ ಶರದ್ ಯಾದವ್ ಜನತಾ ದಳದ ಯುನೈಟೆಡ್ ಅಧ್ಯಕ್ಷರಾಗಿದ್ದರು. 7 ಬಾರಿ ಲೋಕಸಭೆ ಹಾಗೂ 3 ಬಾರಿ ರಾಜ್ಯಸಭಾ ಸಂಸದರಾಗಿದ್ದರು. ಯಾದವ್ ಪತ್ನಿ, ಪುತ್ರಿ ಮತ್ತು ಪುತ್ರರನ್ನು ಅಗಲಿದ್ದಾರೆ. ಶರದ್ ಯಾದವ್ ಅಂತ್ಯಕ್ರಿಯೆಯು ಅವರ ಜನ್ಮಸ್ಥಳ ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ನಾಳೆ ನಡೆಯಲಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ದೆಹಲಿಯಲ್ಲಿ ಅಂತಿಮ ದರ್ಶನ ನಡೆಯಲಿದೆ.

ಶರದ್ ಯಾದವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್ ಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.