ವಿಜಯಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, 82 ವರ್ಷದ ಪಾಂಡಿತ್ಯಪೂರ್ಣ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಳೆದ ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಆಸ್ಪತ್ರೆಗೆ ಸೇರಲಿಚ್ಚಿಸದ ಅವರಿಗೆ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಆದ್ರೆ ವೈಕುಂಠ ಏಕಾದಶಿಯ ಪುಣ್ಯ ದಿನದಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದೇಶ್ವರ ಶ್ರೀಗಳು ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಸದ್ಯ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೈನಿಕ ಶಾಲೆಯ ಮುಖ್ಯದ್ವಾರದ ಮೂಲಕ ಆಗಮಿಸಿ 2 ನೇ ಗೇಟ್‌ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಗರೋಪಾದಿಯಲ್ಲಿ ಬೆಳಂ ಬೆಳಗ್ಗೆ ಭಕ್ತರ ದಂಡು ಹರಿದು ಬರುತ್ತಿದೆ. ನಸುಕಿನ ಜಾವವೇ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಕಿದ ಕಾರಿಡಾರ್ ಸಂಪೂರ್ಣ ಭರ್ತಿಯಾಗಿದೆ.