ಕತಾರ್: ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಫುಟ್‌ಬಾಲ್ ಪೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಮಣಿಸಿ ಅರ್ಜೆಂಟೀನಾ ತಂಡ ಗೆದ್ದು ಬೀಗಿದೆ.
ಮೆಸ್ಸಿ ಈ ಹಿಂದಿನ ನಾಲ್ಕು ವಿಶ್ವಕಪ್ ಟೂರ್ನಿಗಳಲ್ಲಿ ತನಗೆ ದಕ್ಕದೇ ಇದ್ದ ಮಿರುಗುವ ಟ್ರೋಫಿಯನ್ನು ಐದನೇ ಪ್ರಯತ್ನದಲ್ಲಿ ಎತ್ತಿಹಿಡಿದು ಸಂಭಮಿಸಿದ್ದಾರೆ. ನಿಗದಿತ ಮತ್ತು ಹೆಚ್ಚುವರಿ ಅವಧಿಯ ಬಳಿಕ ಉಭಯ ತಂಡಗಳು 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ನಿಗದಿತ ಸಮಯದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ ಎರಡು ಗೋಲುಗಳನ್ನು ಗಳಿಸಿದರೆ, ಇನ್ನೊಂದು ಗೋಲನ್ನು ಏಂಜೆಲ್ ಡಿ ಮರಿಯಾ ಗಳಿಸಿದರು. ಫ್ರಾನ್ಸ್ ತಂಡದ ಮೂರೂ ಗೋಲುಗಳನ್ನು ಕಿಲಿಯಾನ್ ಎಂಬಾಪೆ ಗಳಿಸಿದರು.
ಅರ್ಜೆಂಟೀನಾಕ್ಕೆ ದೊರೆತ ಮೂರನೇ ಟ್ರೋಫಿ ಇದಾಗಿದ್ದು, ಈ ಹಿಂದೆ 1978 ಮತ್ತು 1986 ರಲ್ಲಿ ಚಾಂಪಿಯನ್ ಆಗಿತ್ತು. ಡಿಯೆಗೊ ಮರಡೋನಾ 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ಮಾಡಿದ್ದ ಚಮತ್ಕಾರವನ್ನು ಮೆಸ್ಸಿ, ಮರುಭೂಮಿಯ ನಾಡಿನಲ್ಲಿ ಮಾಡಿ ತೋರಿಸಿದರು. 35 ವರ್ಷದ ಮೆಸ್ಸಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿ ಆಗಿದೆ. ಈ ಮೂಲಕ ಸತತ 2 ನೇ ಬಾರಿ ಪ್ರಶಸ್ತಿ ಜಯಿಸಬೇಕೆಂಬ ಫ್ರಾನ್ಸ್ ತಂಡದ ಕನಸು ನುಚ್ಚುನೂರಾಯಿತು. ಸ್ಟಾರ್ ಆಟಗಾರ ಎಂಬಾಪೆ ಮಿಂಚಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.