ಹರಿಯಾಣದಲ್ಲಿ ಮಂಜಿನಿಂದಾಗಿ ಸರಣಿ ರಸ್ತೆ ಅಪಘಾತ: 30 ವಾಹನಗಳು ಪರಸ್ಪರ ಡಿಕ್ಕಿಯಾಗಿ, 12 ಮಂದಿಗೆ ಗಂಭೀರ ಗಾಯ

ಹರಿಯಾಣ: ಹರಿಯಾಣದ ಕರ್ನಾಲ್ ರಾಷ್ಟ್ರೀಯ ಹೆದ್ದಾರಿ – 44 ರಲ್ಲಿ ಮಂಜಿನಿಂದಾಗಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಮೂರೂ ಸ್ಥಳಗಳಲ್ಲಿ 30 ವಾಹನಗಳು ಪರಸ್ಪರ ಡಿಕ್ಕಿಯಾಗಿ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಟೆಲ್ ಮೇಲ್ಸೇತುವೆ ಬಳಿ ಮೊದಲ ಅಪಘಾತ ಸಂಭವಿಸಿದ್ದು, ಈ ವೇಳೆ ಟ್ರಕ್‌ಗಳು, ಕಾರುಗಳು, ಟ್ರ್ಯಾಕ್ಟರ್ ಟ್ರ್ಯಾಲಿಗಳು ಮತ್ತು ಬಸ್‌ಗಳು ಸೇರಿ ಸುಮಾರು 15 ರಿಂದ 16 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಹಠಾತ್ ಅಪಘಾತದಿಂದ ಪೊಲೀಸ್ ಇಲಾಖೆ ಹಾಗೂ ವಾಹನ ಚಾಲಕರಲ್ಲಿ ಆತಂಕ ಮನೆ ಮಾಡಿದೆ. ಅಪಘಾತದ ನಂತರ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ಮತ್ತೊಂದೆಡೆ, ಮಧುಬನ್ ಬಳಿ ಅಪಘಾತ ಸಂಭವಿಸಿದ್ದು, 10 ರಿಂದ 12 ವಾಹನಗಳು ಜಖಂ ಆಗಿವೆ. ಈ ಅಪಘಾತದಲ್ಲಿ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕರ್ನಾಲ್ ಟೋಲ್ ಬಳಿ ಮೂರನೇ ಅಪಘಾತ ಸಂಭವಿಸಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಮಂಜಿನಿಂದಾಗಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇದರಲ್ಲಿ 30 ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತವಾದ ಬಗ್ಗೆ ಮಾಹಿತಿ ಲಭಿಸಿದೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.