ಡಿ. 30 ಮತ್ತು 31 ರಂದು ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಭಟ್ಕಳ: ಜಿಲ್ಲಾ ಯುವಜನ ಸಬಲೀಕರಣ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ವತಿಯಿಂದ ಡಿ.30 ಮತ್ತು 31 ರಂದು ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು. ಅವರು ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ. 30 ಮತ್ತು 31 ರಂದು ನಡೆಯಲಿರುವ ಕ್ರೀಡಾ ಕೂಟ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಸಲಿದ್ದಾರೆ ಎಂದು ತಿಳಿಸಿದರು.

ಈ ಕ್ರೀಡಾ ಕೂಟದಲ್ಲಿ ಒಟ್ಟು 35 ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಜಿಲ್ಲೆಯ 12 ತಾಲೂಕಿನಿಂದ ಸುಮಾರು 2 ರಿಂದ 3 ಸಾವಿರ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಪರುಷ ಸರ್ಕಾರಿ ನೌಕರರಿಗೆ 40 ಕ್ಕಿಂತ ಕಡಿಮೆ, 40 ರಿಂದ 50, 50 ರಿಂದ 60 ವರ್ಷದ  ಹಾಗೂ ಮಹಿಳಾ ಸರಕಾರಿ ನೌಕರರಿಗೆ  30 ಕ್ಕಿಂತ ಕಡಿಮೆ, 35-45, 50-60 ವರ್ಷ ವಯೋಮಿತಿಗೆ ಒಳ ಪಟ್ಟು 3 ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಕುಸ್ತಿ ಸ್ಪರ್ಧೆ ಹಳಿಯಾಳ ಹಾಗೂ ಈಜು ಸ್ಪರ್ಧೆಯನ್ನು ಶಿರಸಿಯಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ವೈಯಕ್ತಿಕ ವಿಭಾಗದಲ್ಲಿ 5 ಕ್ಕಿಂತ ಕಡಿಮೆ ಸ್ಪರ್ಧಾಳುಗಳು, ಗುಂಪು ಸ್ಪರ್ಧೆಯಲ್ಲಿ 3 ಕ್ಕಿಂತ ಕಡಿಮೆ ತಂಡಗಳು ಭಾಗವಹಿಸಿದ್ದಲ್ಲಿ ಅಂತಹ ಸ್ಪರ್ಧೆಯನ್ನು ರದ್ದುಗೊಳಿಸಲಾಗಿತ್ತದೆ. ಓರ್ವ ಕ್ರೀಡಾಪಟು ಗರಿಷ್ಠ 3 ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ನಿಗಮ ಮಂಡಳಿ, ಗುತ್ತಿಗೆ ಆಧಾರಿತ ಸರ್ಕಾರಿ ನೌಕರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಜಿಲ್ಲೆಯ 12 ತಾಲೂಕುಗಳ ಸರ್ಕಾರಿ ನೌಕರರು ಡಿ. 22 ರ ಸಂಜೆ 5 ಗಂಟೆಯೊಳಗಾಗಿ ಗೂಗಲ್ ಫಾಮ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನಂತರ ಬಂದವರ ಹೆಸರನ್ನು ಪರಿಗಣಿಸುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮವಾಗಿ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷೆ ಡಾ.ಭಾಗೀರಥಿ ನಾಯ್ಕ, ಭಟ್ಕಳ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಯುವ ಜನಸೇವಾ ಕ್ರೀಡಾ ಇಲಾಖೆಯ ಪ್ರಭಾರಿ ನಾಗರಾಜ ಪಟಗಾರ, ಮಂಜುನಾಥ ನಾಯ್ಕ, ಸುಶೀಲ ಮೋಗೆರೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.