ಮಣ್ಕುಳಿಯಲ್ಲಿ ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ

ಭಟ್ಕಳ: ಸರ್ಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ನಮ್ಮ ಕ್ಲಿನಿಕ್ ಎಂಬ ವಿನೂತನ ಯೋಜನೆ ಜಾರಿ ತಂದು ಆರೋಗ್ಯದ ಕುರಿತ ತನ್ನ ಕಾಳಜಿಯನ್ನು ವ್ಯಕ್ತಪಡಿಸಿದೆ ಎಂದು ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ಅವರು ಪಟ್ಟಣದ ಮಣ್ಕುಳಿಯಲ್ಲಿರುವ ಶ್ರೀ ಕಾಮಾಕ್ಷಿ ಬಿಲ್ಡಿಂಗ್‌ನಲ್ಲಿ ನೂತನವಾಗಿ ನಿರ್ಮಾಣವಾದ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿದರು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ಸಣ್ಣಪುಟ್ಟ ಖಾಯಿಲೆಗೆ ಚಕಿತ್ಸೆ ಪಡೆಯುವ ಬದಲು ಹತ್ತಿರ ನಮ್ಮ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ಪುರಸಭೆ ಅಧ್ಯಕ್ಷ ಪರ್ವೆಜ್ ಕಾಶಿಂಜಿ ಮಾತನಾಡಿ ಸರ್ಕಾರದ ಈ ಯೋಜನೆ ಸ್ವಾಗತಾರ್ಹ. ಬಡವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಟಿಎಚ್‌ಒ ಡಾ. ಸವಿತಾ ಕಾಮತ ಮಾತನಾಡಿ ಬಿ.ಪಿ. ಸುಗರ್, ರಕ್ತ ಸೇರಿದಂತೆ ಇತ್ಯಾದಿ ಪರೀಕ್ಷೆಗಳನ್ನು, ಗರ್ಭಿಣಿಯರ ಆರೈಕೆ, ಹಿರಿಯರ ಆರೋಗ್ಯ ತಪಾಸಣೆ, ಯೋಗ ಕೇಂದ್ರ ಸೇರಿ ಇತರ ಎಲ್ಲಾ ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುವದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶಕುಮಾರ ಎಂ.ಕೆ., ಆರೋಗ್ಯ ಇಲಾಖೆಯ ಅನಂತ ಮೊಗೇರ, ಕಟ್ಟಡದ ಮಾಲಿಕ ಆನಂದ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.