ಬೆಂಗಳೂರು: ರಾಜ್ಯದಲ್ಲಿ 400 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಉಚಿತ ಬೂಸ್ಟರ್ ಡೋಸ್ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜುಲೈ 28 ಕ್ಕೆ ಬೊಮ್ಮಾಯಿ ನೇತೃತ್ವದ ಸರ್ಕಾರ ರಚನೆಯಾಗಿ ಒಂದು ವರ್ಷ ಆಗುತ್ತದೆ. ಸಿಎಂ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಜುಲೈ 28ಕ್ಕೆ `ನಮ್ಮ ಕ್ಲಿನಿಕ್’ ಓಪನ್ ಮಾಡೋದಕ್ಕೆ ಅಧಿಕಾರಿಗಳು ಶ್ರಮಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಇನ್ನು ರಾಜ್ಯದಾದ್ಯಂತ 400 ನಮ್ಮ ಕ್ಲಿನಿಕ್ ತೆರೆಯಲು ಚಿಂತನೆ ನಡೆಸಿದ್ದು ಈ ಪೈಕಿ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್ ಓಪನ್ ಆಗಲಿದೆ ಎಂದು ಸುಧಾಕರ್ ತಿಳಿಸಿದರು.