ಸಾಗರ: ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಪ್ರೊ. ಭಗವಾನ್ ವಿರುದ್ಧ ಜೆಎಂಎಫ್‌ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಾಗಿತ್ತು. ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾಹಿತಿ ಭಗವಾನ್ ವಿರುದ್ಧ ಇಂದು ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
‘ರಾಮ ಮಂದಿರ ಏಕೆ ಬೇಡ ಕೃತಿಯಲ್ಲಿ ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತರುವ ಸಂಗತಿಗಳನ್ನು ನಿರೂಪಿಸಿದ್ದಾರೆ ಎಂದು ಆರೋಪಿಸಿ ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯ ಹಳೆ ಇಕ್ಕೇರಿಯ ಮಹಾಬಲೇಶ್ವರ ಎಂಬ ಸಂಘ ಪರಿವಾದ ಕಾರ್ಯಕರ್ತ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಪ್ರಕರಣದ ಕುರಿತು ದೀರ್ಘಕಾಲದ ವಿಚಾರಣೆ ನಡೆಸಿದ ನ್ಯಾಯಾಲಯ, ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿತ್ತು. ಪ್ರಕರಣದ ವಿಚಾರಣೆಗೆ ಇಂದು ಭಗವಾನ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೂ ಸಹ ಇಂದು ಸಾಹಿತಿ ಭಗವಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನುರಹಿತ ಬಂಧನ ವಾರೆಂಟ್‌ಗೆ ಆದೇಶಿಸಿದೆ.