ನವದೆಹಲಿ: ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪದೇಪದೇ ವಿಚಾರಣೆ ನಡೆಸುತ್ತಿದ್ದ ಇ.ಡಿ ವಿರುದ್ಧ ಡಿಕೆಶಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ದೆಹಲಿ ಹೈಕೋರ್ಟ್ ಈ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಅ. 7ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡುವಂತೆ ಡಿಕೆಶಿ ಮಾಡಿದ್ದ ಮನವಿಯನ್ನು ಇಡಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು.
ಎಲ್ಲ ವಿಚಾರಣೆಗಳು ಮುಗಿದಿದ್ದರೂ ಅನಗತ್ಯವಾಗಿ ಮತ್ತೊಮ್ಮೆ ವಿಚಾರಣೆಯ ನೆಪ ಹೂಡಿ ಈಗ ಚುನಾವಣೆಯ
ಸಂದರ್ಭದಲ್ಲಿ ಬಂಧನಕ್ಕೆ ಸಂಚು ಹೂಡಲಾಗಿದೆ. ಇಂಥ
ತಂತ್ರಗಳಿಗೆ ಅವಕಾಶ ನೀಡಬಾರದು ಎಂದು
ಡಿ.ಕೆ.ಶಿವಕುಮಾರ್ ಅವರು ಅರ್ಜಿಯಲ್ಲಿ ಮನವಿ
ಮಾಡಿಕೊಂಡಿದ್ದಾರೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿಕೆ ಶಿವಕುಮಾರ್, ನನಗೆ ಕಾನೂನಿನ ಬಗ್ಗೆ ಗೌರವವಿದೆ. ನಾನು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದೆ. ಆದರೆ ಅವರು ನೀವು ಬರಬೇಕು ಎಂದು ಹೇಳಿದರು. ಹೀಗಾಗಿ, ವಿಚಾರಣೆಗೆ ಹಾಜರಾಗಿ, ನನಗೆ ಗೊತ್ತಿರುವ ಎಲ್ಲ ಉತ್ತರ ನೀಡಿದ್ದೇನೆ ಎಂದು ಹೇಳಿದ್ದರು.