ಶಿವಮೊಗ್ಗ: ಹಬ್ಬದ ಸಂಭ್ರಮದ ನಡುವೆಯೇ ನಗರದಲ್ಲಿ ನಿನ್ನೆ ರಾತ್ರಿಯೂ ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನೂ ನಗರ ಮತ್ತೊಬ್ಬ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ನಗರದ ವೆಂಕಟೇಶ ನಗರದ ನಡುರಸ್ತೆಯಲ್ಲೇ ವಿಜಯ್ (37) ನನ್ನು ಕೊಲೆ ಮಾಡಲಾಗಿದೆ. ಮೃತನು ಆಸ್ಪತ್ರೆವೊಂದರ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ವೈಯಕ್ತಿಕ ಕಾರಣಕ್ಕಾಗಿ ವ್ಯಕ್ತಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಭರ್ಮಪ್ಪ ನಗರದ ನಿವಾಸಿಯಾದ ಪ್ರಕಾಶ್ ಹಲ್ಲೆಗೊಳಗಾದ ಯುವಕ. ನಿನ್ನೆ ರಾತ್ರಿ ಸುಮಾರು 11.20 ರ ಸುಮಾರಿಗೆ ಬೈಕ್ ನಲ್ಲಿ ಬಂದ ಮೂವರು ಯುವಕರಿಂದ ಈ ಕೃತ್ಯ ನಡೆದಿದ್ದು, ಕಲ್ಲು ಮತ್ತು ಇಟ್ಟಿಗೆಯಿಂದ ಮುಖ ಹಾಗೂ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ತಕ್ಷಣ ಪ್ರಕಾಶ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಪ್ರಕಾಶ್ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ.
ಈ ಎರಡು ಪ್ರಕರಣ ನಡೆದ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವಿಜಯ್ ರಾತ್ರಿ 1:30ರ ವರೆಗೂ ಮನೆಯಲ್ಲೇ ಇದ್ದು, ಕರೆ ಬಂದ ಹಿನ್ನೆಲೆ ಹೊರಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರ ಬರುತ್ತಾನೆ. ಸುಮಾರು 3 ಗಂಟೆ ಸಮಯದಲ್ಲಿ ಕೃತ್ಯ ನಡೆದಿದ್ದು, ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಅಲ್ಲದೇ ಸ್ಥಳದಲ್ಲಿ ಕೆಲ ವಸ್ತುಗಳು ಲಭ್ಯವಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ.
ಇನ್ನೂ ಪ್ರಕಾಶ್ ಮೊನ್ನೆ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆರ್ ಎಸ್ಎಸ್ ಗಾಂಡುಗಳು ಎಂದು ನಿಂದಿಸಿ ಹಲ್ಲೆ ನಡೆಸಿದರು ಎಂದು ಪ್ರಕಾಶ್ ಹೇಳಿಕೆ ನೀಡಿದ್ದಾನೆ. ಹಾಗೇ ದುಷ್ಕರ್ಮಿಗಳು ಹತ್ಯೆಗೀಡಾದ ಹರ್ಷನ ಮನೆ ಬಳಿಯೂ ತೆರಳಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.