ಬೆಂಗಳೂರು: ರಾಜಧಾನಿಯ ಸಂಚಾರ ವಿಭಾಗದ ಪೊಲೀಸರು ಕಳಪೆ ಗುಣಮಟ್ಟದ ಹೆಲ್ಮೆಟ್ ನಿರ್ಮೂಲನೆಗೆ ಮುಂದಾಗಿದ್ದು, ಇನ್ಮೇಲೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವವರ ಮೇಲೆ ದಂಡ ವಿಧಿಸಲು ನಿರ್ಧರಿಸಿದ್ದಾರೆ.
ಕಳಪೆ ಹೆಲ್ಮೆಟ್ ಧರಿಸುವುದನ್ನು ನಿರ್ಬಂಧಿಸಿ ದಂಡ ವಿಧಿಸಲು ವಿಶೇಷ ನಿಯಮ ಅಥವಾ ಕಾನೂನು ಇಲ್ಲಿಯವರೆಗೆ ಜಾರಿಯಲ್ಲಿಲ್ಲ. ಹೀಗಾಗಿ ಹಾಫ್ ಅಥವಾ ಕಳಪೆ ಹೆಲ್ಮೆಟ್ ಧರಿಸಿದರೆ ಅಂಥವರಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ಪರಿಗಣಿಸಿ ಪೊಲೀಸರು 500 ರೂ. ದಂಡ ವಿಧಿಸಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ ಹಾಫ್ ಹೆಲ್ಮೆಟ್ ಧರಿಸುವ ಪೊಲೀಸರಿಗೆ ಬಿಸಿ ಮುಟ್ಟಿಸಿರುವ ಸಂಚಾರ ವಿಭಾಗದ ಪೊಲೀಸರು, ಇಲ್ಲಿಯವರೆಗೆ 140 ಪೊಲೀಸರಿಗೆ ದಂಡ ವಿಧಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಹಾಫ್ ಹೆಲ್ಮೆಟ್ ಬಳಕೆ ನಿಷೇಧ ನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತಂದ ಬಳಿಕ ಪೊಲೀಸರು ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ನವೆಂಬರ್‌ನಲ್ಲಿ ಹೆಲ್ಮೆಟ್ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಲಾಗಿದೆ..