ಬೆಂಗಳೂರು: ಅರಮನೆ ಮೈದಾನದಲ್ಲಿ ಅಗಲಿದ ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳುತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಿನಿಮಾ ಗಣ್ಯರು ಭಾಗವಹಿಸಲಿದ್ದಾರೆ.
ಪುನೀತ್ ನಟನೆಯ ಕೊನೆಯ ಸಿನಿಮಾ ‘ಗಂಧದ ಗುಡಿ’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪುನೀತ್ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತರು ಭಾಗಿಯಾಗಲಿದ್ದಾರೆ.
ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್ನಿಂದಲೂ ನಟ, ನಟಿಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದ್ದು, ನಟ ಶಿವರಾಜ್ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ, ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.