ಮತ್ತೆ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆ ತಡೆಹಿಡಿದ ಕೇಂದ್ರ ಸರ್ಕಾರ.!

ನವದೆಹಲಿ: ಭಾರತದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಬಿತ್ತುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಕಾನೂನುಕ್ರಮದ ಭಾಗವಾಗಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಖಾತೆಯನ್ನು ತಡೆಹಿಡಿದಿರುವುದರಿಂದ ಭಾರತದಲ್ಲಿ ಟ್ವಿಟರ್ ಬಳಕೆದಾರರು ಪಾಕಿಸ್ತಾನದ ಟ್ವೀಟರ್ ಅಕೌಂಟ್‌ನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಎಎನ್‌ಐ ಟ್ವೀಟ್ ಮಾಡಿದೆ. ಈ ಹಿಂದೆ ಜೂನ್‌ನಲ್ಲಿ ಕೂಡ ಇದೇ ರೀತಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿತ್ತು. ಆದರೆ ತಕ್ಷಣವೇ ಅದನ್ನು ಕೇಂದ್ರ ಸರ್ಕಾರ ತೆಗೆದುಹಾಕಿತ್ತು.