ನವದೆಹಲಿ: ಭಾರತೀಯ ಸೇನೆಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ತೆರವಾಗಿದ್ದ ಹುದ್ದೆಗೆ ಕೇಂದ್ರ ಸರ್ಕಾರ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
1961 ರ ಮೇ 18 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನೇಮಕಗೊಂಡರು. ಚೌಹಾಣ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್ವಾಸ್ಲಾ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್‌ನ ಹಳೆಯ ವಿದ್ಯಾರ್ಥಿ. ಮೇಜರ್ ಜನರಲ್ ಶ್ರೇಣಿಯಲ್ಲಿ ಉತ್ತರ ಕಮಾಂಡ್‌ನಲ್ಲಿ ನಿರ್ಣಾಯಕ ಬಾರಾಮುಲಾ ವಲಯದಲ್ಲಿ ಪದಾತಿ ದಳದ ವಿಭಾಗವನ್ನು ವಹಿಸಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ, ಅವರು ಈಶಾನ್ಯದಲ್ಲಿ ಸೇನಾ ನೇತೃತ್ವ ವಹಿಸಿದರು.ಬರ್ 2019 ರಿಂದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದು ಮೇ 2021 ರಲ್ಲಿ ಸೇವೆಯಿಂದ ನಿವೃತ್ತರಾದರು. ಇದೀಗ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.
2021ರ ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಅವರು ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್ ಹುದ್ದೆ ತೆರವಾಗಿತ್ತು.