ಸಿಡಿಲು ಬಡಿದು ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಯಾದಗಿರಿ: ಸಿಡಿಲು ಬಡಿದು ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ತಾಲೂಕಿನ ಎಮ್ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ಮೋನಮ್ಮ (25), ಮಕ್ಕಳು ಬಾನು (4), ಶ್ರೀನಿವಾಸ (2) ಮೃತ ದುರ್ದೈವಿಗಳು. ಇನ್ನು ಮೋನಮ್ಮ ಅವರ ಮೈದುನ ಭೀಮಾಶಂಕರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಇದೇ ಗ್ರಾಮದ ಸಾಬಣ್ಣ ಎಂಬ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಿಡಿಲು ಬಂದೆರಗುತ್ತಿದ್ದಂತೆ ಎರಡು ವರ್ಷದ ಮಗುವನ್ನ ಮೋನಮ್ಮ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಮೋನಮ್ಮ ಹಾಗೂ ಮಗು ಇಬ್ಬರು ನೆಲಕ್ಕೆ ಬಿದ್ದಿದ್ದಾರೆ. ತಾಯಿ ಸಾಯುವಾಗಲೂ ಮಗುವನ್ನ ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯ ಮನಕಲಕುವಂತಿದೆ.

ಗಾಯಗೊಂಡ ಭೀಮಾಶಂಕರ್ ಗೆ ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಳೆ ಬಂದ ಹಿನ್ನೆಲೆ ಮರದ ಕೆಳಗೆ ನಿಂತಿದ್ದಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.