ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಈ ಬಾರಿ ಅದ್ಧೂರಿಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರಿಸಿದೆ. ಸೆ. 26 ರಂದು ನಾಡಹಬ್ಬ ಮೈಸೂರು ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸೆ. 26 ದಸರಾ ಆರಂಭಗೊಳ್ಳಲಿದ್ದು, ಅ. 5 ವರೆಗೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಉದ್ಘಾಟನೆ ವಿಚಾರ ಸಭೆ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟನೆ ಮಾಡಿಸುವ ನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಗೆ ಪತ್ರ ಬರೆಯಲಾಗಿತ್ತು. ಇದೀಗ ಪತ್ರಕ್ಕೆ ಸಮ್ಮತಿ ಸೂಚಿಸಿ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಈ ಬಾರಿ ರಾಷ್ಟ್ರದ ಪ್ರಥಮ ಪ್ರಜೆ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.