ಉತ್ತರ ಪ್ರದೇಶ: ಲಕ್ನೋ-ದೆಹಲಿ ಹೆದ್ದಾರಿಯ ಸೀತಾಪುರ ಜಿಲ್ಲೆಯ ಸಿದ್ಧೌಲಿ ಪ್ರದೇಶದಲ್ಲಿ 35 ಕ್ಕೂ ಹೆಚ್ಚು ಜನರಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಬಾರಾಬಂಕಿ ಜಿಲ್ಲೆಯ ದೇಗುಲಕ್ಕೆ ಮಗುವಿನ ಹೆಸರಿನಲ್ಲಿ ಪೂಜೆ ಮಾಡಿಸಲು ಟ್ರಾಕ್ಟರ್ ಮೂಲಕ ಕುಟುಂಬ ಸದಸ್ಯರೆಲ್ಲ ಸೇರಿ ಗುರುವಾರ ಮುಂಜಾನೆ 1:30 ರ ಸುಮಾರಿಗೆ ತೆರಳಿದ್ದರು. ಬಾರಿ ಮಳೆ ಸುರಿಯುತ್ತಿದ್ದ ಪರಿಣಾಮ ರಸ್ತೆ ಸರಿಯಾಗಿ ಕಾಣದ ಹಿನ್ನೆಲೆ ಚಾಲಕ ಟ್ರ್ಯಾಕ್ಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ. ಈ ವೇಳೆ ವೇಗವಾಗಿ ಬಂದ ಟ್ರಕ್ ಟ್ರ್ಯಾಕ್ಟರ್ ಟ್ರಾಲಿ ಗೆ ಡಿಕ್ಕಿ ಹೊಡೆದಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕ್ರೇನ್ ಮೂಲಕ ವಾಹನಗಳನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು. ಈ ದುರ್ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.