ಯಲ್ಲಾಪುರ: ನೆನಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಅನುಷ್ಠಾನಗೊಳಿಸುವ ಸಲುವಾಗಿ ಸ್ಥಳೀಯ ಹೋರಾಟ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು. ಅವರು ಸೋಮವಾರ ಸಾಹಿತ್ಯ ಭವನದಲ್ಲಿ ನಡೆದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರವಾದಿಗಳಿಂದಾಗಿ ಯೋಜನೆಗೆ ಯಲ್ಲಾಪುರ ಭಾಗದಲ್ಲಿ ವಿಘ್ನ ಬಂದಿದೆ. ಆನೆ ಕಾರಿಡಾರ ಇದೆ ಅಂತಾದರೆ ಆ ಭಾಗದಲ್ಲಿ ಪೈ ಓವರ್ ಮಾಡಬಹುದು. ಘಟ್ಟಪ್ರದೇಶದಲ್ಲಿ ಸುರಂಗ ಮಾರ್ಗದ ಮೂಲಕ ಮಾರ್ಗ ನಿರ್ಮಾಣ ಮಾಡಬಹುದು. ಮರಗಳಿಗೆ ಕಡಿಮೆ ಹಾನಿಯಾಗುವ ಯೋಜನೆ ರೂಪಿಸಲು ಸಾಧ್ಯ. ಇಡೀ ದೇಶದ ತುಂಬೆಲ್ಲಾ ರೈಲು ಮಾರ್ಗವಿದ್ದು, ಅಲ್ಲೆಲ್ಲೂ ಪರಿಸರಕ್ಕೆ ಹಾನಿಯಾಗಿಲ್ಲವೇ? ಕೇವಲ ಯಲ್ಲಾಪುರ ಭಾಗದಲ್ಲಿ ಮಾತ್ರ ಪರಿಸರ ಹಾನಿಯಾಗುತ್ತದೆ ಎಂದು ತಡೆ ತರುವ ಹುನ್ನಾರದಿಂದಾಗಿ ಜಿಲ್ಲೆಯಲ್ಲಿ ಯಲ್ಲಾಪುರ ಮಾತ್ರ ರೈಲು ಯೋಜನೆಯಿಂದ ವಂಚಿತವಾಗುವ ಅಪಾಯ ಇದೆ. ಹಾಗಾಗಿ ಹೋರಾಟ ಚುರುಕು ಗೊಳಿಸಬೇಕು ಎಂದರು.
ಈಗಾಗಲೇ ಯಲ್ಲಾಪುರ ಹಾಗೂ ಅಂಕೋಲಾ ದಲ್ಲಿ ಸಭೆ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಪರಿಸರ ಮಂಡಳಿ ಸೆ.16 ರಂದು ತನ್ನ ಅಭಿಪ್ರಾಯ ರಾಜ್ಯ ಹೈಕೊರ್ಟ್ ಗೆ ತಿಳಿಸಲಿದೆ. ಅದರ ಅಭಿಪ್ರಾಯ ಏನೇ ಬಂದರೂ ಯೋಜನೆಯ ಕಾರ್ಯಗತ ಮಾಡಲು ಹೋರಾಟ ತೀವೃಗೊಳಿಸುವುದೊಂದೇ ದಾರಿ. ಸೆ. 26 ರಂದು ಕೇಂದ್ರ ಸಮಿತಿ ಮಾರ್ಗವಾರು ಪರಿಶೀಲನೆಗೆ ಜಿಲ್ಲೆಗೆ ಆಗಮಿಸಲಿದೆ. ಅವರ ಮುಂದೆ ನಮ್ಮ ಅಹವಾಲು ಮಂಡನೆಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರೇಲ್ವೆ ಹೋರಾಟ ಸಮಿತಿ ರಚನೆಗೆ ನಿರ್ಧರಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ. ಜಿ ಹೆಗಡೆ, ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ಶ್ರೀ ರಂಗ ಕಟ್ಟಿ, ವೇಣುಗೋಪಾಲ ಮದ್ಗುಣಿ, ಜಗನ್ಬಾಥ ರೇವಣಕರ್, ಎಂ.ಡಿ ಮುಲ್ಲಾ, ಬಾಬು ಬಾಂದೇಕರ್, ಜಿ.ಆರ್.ಹೆಗಡೆ ಹಾಗೂ ಮುಂತಾದವರು ಇದ್ದರು.