ಮನೆಯ ಗೋಡೆ ಕುಸಿದು ಯುವಕನೋರ್ವ ಸಾವು

ಸಿದ್ದಾಪುರ: ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಮನೆಯ ಗೋಡೆ ಕುಸಿದು ಯುವಕನೋರ್ವ ಧಾರುಣ ಸಾವು ಕಂಡ ಘಟನೆ ತಾಲೂಕಿನ ಕ್ಯಾದಗಿಯಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ. ಚಂದ್ರಶೇಖರ ನಾರಾಯಣ ಹಸ್ಲರ್ ಎಂಬಾತ ಮೃತಪಟ್ಟ ಯುವಕ.

ಎಂದಿನಂತೆ ಮನೆಯಲ್ಲಿ ಮಲಗಿರುವಾಗ ಏಕಾಏಕಿ ಗೋಡೆ ಕುಸಿದು ಮೈಮೇಲೆ ಬಿದಿದ್ದು, ತೀವ್ರ ಗಾಯಗೊಂಡ ಆತನನ್ನು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ತೀರಾ ಬಡವರಾಗಿರುವ ಪದ್ಮಾವತಿ ಹಸ್ಲರ್ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು.‌

ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ‌ ಭಾರಿ ಮಳೆ ಸುರಿಯುತ್ತಿರುವುದರ ಜೊತೆಗೆ ಗಾಳಿಯ ಆರ್ಭಟವು ಜೋರಾಗಿದ್ದು, ಗೋಡೆ ಕುಸಿದು ಯುವಕನ ಜೀವ ಬಲಿ ತೆಗೆದುಕೊಂಡಿದೆ. ಮೃತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಾಲೂಕಾ ದಂಡಾಧಿಕಾರಿ ಸಂತೋಷ ಭಂಡಾರಿ ಹಾಗೂ ಕಂದಾಯ ನಿರೀಕ್ಷಕ ಯಶವಂತ ಅಪ್ಪಿನಬೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.